ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಸದುಪಯೊಗಕ್ಕೆ ಸಿಇಓ ಕರೆ

ತುಮಕೂರು : ರೈತ ಕುಟುಂಬದ ಎಲ್ಲಾ ಮಕ್ಕಳು ಇತರೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಪಡೆಯಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಕೆ. ವಿದ್ಯಾಕುಮಾರಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಸಕ್ತ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಸುವ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರು ಮತ್ತು ಎಲ್ಲಾ ತಾಲ್ಲೂಕು ಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶ ಪಡೆದಿರುವ ರಾಜ್ಯದ ರೈತರ ಎಲ್ಲ ಮಕ್ಕಳ ಖಾತೆಗಳಿಗೆ 2021-22ನೇ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ನೇರ ನಗದು ವರ್ಗಾವಣೆ (Direct Benefit Transfer- DBT) ಮೂಲಕ 2 ಸಾವಿರದಿಂದ 11ಸಾವಿರ ರೂ.ಗಳವರೆಗೆ ವಾರ್ಷಿಕ ಶಿಷ್ಯವೇತನದ ರೂಪದಲ್ಲಿ ಪಾವತಿಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ 8 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ವಾರ್ಷಿಕವಾಗಿ ರೂ.2000 ವಿದ್ಯಾರ್ಥಿ ವೇತನ ಪಾವತಿಸಲಾಗುತ್ತಿದೆಯಲ್ಲದೇ2021-22ನೇ ಸಾಲಿಗೆ ಪದವಿ ಪೂರ್ವ ಶಿಕ್ಷಣ ಕೋರ್ಸ್‌ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ Sats ID ಮತ್ತು FID ಅನ್ವಯ ಅರ್ಹರನ್ನು ಗುರುತಿಸಿ ವಿದ್ಯಾರ್ಥಿವೇತನ ನೀಡಲಾಗಿದೆ ಎಂದು ತಿಳಿಸಿದರು.

ಇತರೆ ಎಲ್ಲಾ ಪದವಿ ಕೋರ್ಸ್‌ಗಳ ರೈತರ ಮಕ್ಕಳು ಜಾಲತಾಣhttps://ssp.postmetric.karnataka.gov.inಮೂಲಕ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತು NPCI mapping ಹಾಗೂ ತಂದೆ- ತಾಯಿ ಅಥವಾ ಕುಟುಂಬದ ಹಿರಿಯರ ಹೆಸರಿನಲ್ಲಿ ರೈತ ಪುರಾವೆಯಾಗಿರುವ FID ಹೊಂದಿರುವುದು ಕಡ್ಡಾಯ ಎಂದರಲ್ಲದೇ FID ನೋಂದಣಿಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಮಾಡಿಸಬಹುದೆಂದು ತಿಳಿಸಿದರು.

ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನ ಸಭೆಗೆ ಮಾಹಿತಿ ನೀಡುತ್ತಾ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ 8 ರಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಮಾತ್ರ ೨೦೦೦ ವಿದ್ಯಾರ್ಥಿ ವೇತನ ಪಾವತಿಸಲಾಗುತ್ತಿದೆ ಎಂದ ಅವರು ಪಿ.ಯು.ಸಿ/ ಐಟಿಐ/ ಡಿಪ್ಲೊಮಾ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ರೂ.2500 ಮತ್ತು ವಿದ್ಯಾರ್ಥಿನಿಯರಿಗೆ 3000 ನೀಡಲಾಗುತ್ತಿದೆ ಎಂದರು.ಎಲ್ಲಾ ಬಿ.ಎ/ ಬಿ.ಎಸ್ಸಿ/ ಬಿ.ಕಾಂ/ ಬಿ.ಇ/ ಬಿ.ಟೆಕ್/ ಎಂಬಿಬಿಎಸ್( ವೃತ್ತಿಪರ ಕೋರ್ಸ್‌ಗಳನ್ನು ಹೊರತುಪಡಿಸಿ) ಎಲ್ಲಾ ಸ್ನಾತಕ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೂ. 5000 ಮತ್ತು ವಿದ್ಯಾರ್ಥಿನಿಯರಿಗೆ 5500 ವಾರ್ಷಿಕ ಶಿಷ್ಯವೇತನ ನೀಡಲಾಗುತ್ತಿದೆ.ಎಲ್.ಎಲ್.ಬಿ/ ಪ್ಯಾರ ಮೆಡಿಕಲ್/ ಬಿ.ಫಾರ್ಮ್/ ನಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ರೂ.7500 ಮತ್ತು ವಿದ್ಯಾರ್ಥಿನಿಯರಿಗೆ ರೂ. 8000 ಹಾಗೂ ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೂ.10,000 ಮತ್ತು ವಿದ್ಯಾರ್ಥಿನಿಯರಿಗೆ ರೂ.11.000 ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರಲ್ಲದೇ ಈವರೆಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ನೊಂದಣಿಯಾಗಿರುವ 51,541 ವಿದ್ಯಾರ್ಥಿ/ನಿಯರ ಪೈಕಿ 41,199 ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ ಎಂದರು.

ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರು ಮತ್ತು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!