ಕಳಪೆ ನಾಟಿ ಕೋಳಿ ಮರಿ ವಿತರಣೆ ಆರೋಪ : ಅಧಿಕಾರಿಗಳಿಗೆ ಫಲಾನುಭವಿಗಳ ತರಾಟೆ

ಕುಣಿಗಲ್ : ಗ್ರಾಮೀಣ ರೈತ ಮಹಿಳೆಯರಿಗೆ ವಿತರಿಸಲು ತಂದಿದ್ದ ನಾಟಿ ಕೋಳಿ ಮರಿಗಳು, ತೂಕವಿಲ್ಲ ಹಾಗೂ ಕಳಪೆಯಿಂದ ಕೂಡಿದೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಫಲಾನುಭವಿಗಳು ಕೋಳಿಗಳನ್ನು ತಿರಸ್ಕರಿಸಿದ ಪ್ರಸಂಗ ಪಟ್ಟಣ ಪಶು ಆಸ್ಪತ್ರೆ ಅವರಣಲ್ಲಿ ಗುರುವಾರ ನಡೆಯಿತು.

ಪಶು ಇಲಾಖೆಯಿಂದ ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ ಕೋಳಿ ವಿತರಣಾ ಕಾರ್ಯಕ್ರಮವನ್ನು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಸಿ.ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಪಶು ಇಲಾಖೆ ಅವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು, ಅಧಿಕಾರಿಗಳು ಫಲಾನುಭವಿಗಳಿಗೆ ಕೋಳಿಗಳನ್ನು ವಿತರಿಸಲು ಮುಂದಾದರು, ಕೋಳಿಗಳನ್ನು ತೆಗೆದುಕೊಂಡ ಮಹಿಳೆಯರು ಕೋಳಿ ತೂಕವಿಲ್ಲ ಹಾಗೂ ಕಳಪೆ ಗುಣಮಟ್ಟದ್ದಾಗಿದೆ, ಬೇರೆ ಊರುಗಳಲ್ಲಿ ವಿತರಣೆ ಮಾಡಿರುವ ಕೋಳಿಗಳು ತೂಕವಿದೆ ಹಾಗೂ ಗುಣಮಟ್ಟದ್ದಾಗಿದೆ, ಆದರೆ  ನೀವು ನಮಗೆ ನೀಡುತ್ತಿರುವ ಕೋಳಿಗಳು ಗುಣಮಟ್ಟವಿಲ್ಲ ಹಾಗೂ ಸಾಕಲು ಯೋಗ್ಯವಿಲ್ಲ, ಮನೆಗೆ ತೆಗೆದುಕೊಂಡು ಹೋಗಿ ಎರಡು ಮೂರು ದಿನಗಳಲ್ಲಿ ಸಾಯುವ ಸ್ಥಿತಿಯಲ್ಲಿ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಫಲಾನುಭವಿಗಳು ಪಶು ಇಲಾಖೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು, ಕಳಪೆ ಗುಣಮಟ್ಟದ ಕೋಳಿಗಳು ನೀವೆ ಇಟ್ಟುಕೊಳ್ಳಿ ಎಂದು ಕೋಳಿಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರು, 

ಕೋಳಿ ಮೊಟ್ಟೆ ಪೌಷ್ಠಿಕಾಂಶ ಆಹಾರ : ಕರ್ನಾಟಕ ಕೋ ಆಪರೇಟಿವ್ ಪೌಲ್ಟ್ರಿ ಫೆಡರೇಷನ್‌ನ ಸಹಾಯಕ ನಿರ್ದೇಶಕ ರಾಮಕೃಷ್ಣರೆಡ್ಡಿ ಮಾತನಾಡಿ ಗ್ರಾಮೀಣ ಪ್ರದೇಶದ ಜನರಿಗೆ ಪೌಷ್ಠಿಕ ಆಹಾರ ಓದಗಿಸುವ ನಿಟ್ಟಿನಲ್ಲಿ ರೈತ ಮಹಿಳೆಯರಿಗೆ ಸರ್ಕಾರ ಉಚಿತವಾಗಿ ನಾಟಿ ಕೋಳಿ ಮರಿಗಳನ್ನು ನೀಡುತ್ತಿದೆ, ಈಗ ನೀಡುತ್ತಿರುವ ನಾಟಿ ಕೋಳಿಗಳು ಹೊಸ ತಳಿ ಕೋಳಿಯಾಗಿವೆ, ಪೌಷ್ಠಿಕಾಂಶ ಒಳಗೊಂಡ ಮೊಟ್ಟೆಯನ್ನು ಈ ಕೋಳಿಗಳು ಇಡುತ್ತವೆ, ವರ್ಷಕ್ಕೆ ಒಂದು ಕೋಳಿ ೧೫೦ ಮೊಟ್ಟೆ ಇಡುತ್ತವೆ, ಮೊಟ್ಟೆಗಳು ಪೌಷ್ಠಿಕ ಆಹಾರವಾಗಿರುತ್ತದೆ, ಇದನ್ನು ತಿಂದು ಆರೋಗ್ಯವಂತರಾಗಿರಲೆಂದು ಸರ್ಕಾರ ನೀಡುತ್ತಿದೆ, ಆದರೆ ಕೋಳಿಗಳು ಮಾಂಸಕ್ಕಲ್ಲ, ಮೊಟ್ಟೆಗಾಗಿ ಮಾತ್ರ ಎಂದು ಸ್ಪಷ್ಟಪಡಿಸಿದ ರಾಮಕೃಷ್ಣರೆಡ್ಡಿ ಈ ಕೋಳಿಗಳಿಗೆ ಪಶು ಇಲಾಖೆಯಿಂದ ಲಸಿಕೆ ನೀಡಲಾಗುತ್ತಿದೆ, ಕೋಳಿಗಳು ಸಾಯುವುದಿಲ್ಲ, ಇದನ್ನು ಸಾಕಿ ಮೊಟ್ಟೆಯನ್ನು ಮನೆಗೆ ಬಳಸಿಕೊಂಡು ಮಹಿಳೆಯರು ಕೋಳಿ ಸಾಗಾಣಿಕೆ ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ದಿ ಹೊಂದುವಂತೆ ತಿಳಿಸಿದರು,

ಮನವರಿಕೆ ಬಳಿಕ ಕೋಳಿ ಪಡೆದ ಫಲಾನುಭವಿಗಳು : ತಾಲೂಕು ಪಶು ವೈದ್ಯಾಧಿಕಾರಿ ಡಾ.ಕೆ.ಸಿ.ಕೃಷ್ಣಮೂರ್ತಿ ಮಾತನಾಡಿ ನಾಟಿ ಕೋಳಿಯಲ್ಲಿ ಕಾವೇರಿ ಹಾಗೂ ಅಸೀಲ್ ಎಂಬ ಎರಡು ವಿಧಾನದ ಕೋಳಿಗಳಿದ್ದು, ಅಸೀಲ್ ಕೋಳಿ ಇದರ ಗಾತ್ರ ಸಣ್ಣದಾಗಿರುತ್ತದೆ ಆದರೆ ಮೊಟ್ಟೆ ಜಾಸ್ತಿ ಕೊಡುತ್ತದೆ, ಕಾವೇರಿ ಕೋಳಿ ಗಾತ್ರದಲ್ಲಿ ದಪ್ಪವಾಗಿದ್ದು ಮೊಟ್ಟೆ ಕಡಿಮೆ ಕೊಡುತ್ತದೆ ಈ ಕೋಳಿ ಮಾಂಸಕ್ಕೂ ಉಪಯೋಗಿಸ ಬಹುದು ಸಣ್ಣ ಮತ್ತು ದಪ್ಪ ಇರುವ ಎರಡು ಮಿಶ್ರಿತ ಕೋಳಿಗಳು ಬಂದಿವೆ ಸಣ್ಣ, ದಪ್ಪ ಎಲ್ಲಾ ಸೇರಿ ವಿತರಣೆ ಮಾಡಲಾಗುತ್ತಿದೆ, ಈ ಕೋಳಿಗಳಲ್ಲಿ ಯಾವುದೇ ಕಳಪೆ ಗುಣಮಟ್ಟ ಇಲ್ಲ, ಈ ಕೋಳಿಗಳು ಗುಣಮಟ್ಟದಿಂದ ಕೂಡಿವೆ, ಈ ಕೋಳಿ ಮರಿಗಳನ್ನು ಬೆಂಗಳೂರಿನ ಹೆಸರಘಟ್ಟ ಕೇಂದ್ರೀಯ ಕುಕ್ಕುಟ ಅಭಿವೃದ್ದಿ ಸಂಸ್ಥೆಯಿಂದ ತರಲಾಗಿದ್ದು. ಒಬ್ಬರಿಗೆ ತಲಾ 20 ಕೋಳಿಯಂತೆ 106 ಮಂದಿ ಫಲಾನುಭವಿಗಳಿಗೆ 2120 ಕೋಳಿ ಮರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಫಲಾನುಭವಿಗಳಿಗೆ ಮನವರಿಕೆ ಮಾಡಿಕೊಟ್ಟರು. ಬಳಿಕ ಫಲಾನುಭವಿಗಳು ಕೋಳಿ ಮರಿಗಳನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಜಾನವಾರು ಅಭಿವೃದ್ದಿ ಅಧಿಕಾರಿ ಡಾ.ಶಿವಶಂಕರಯ್ಯ, ಕಿರಿಯ ಪಶು ಪರೀಕ್ಷಕರು ಶಕುಂತಲಾ, ಇಲಾಖೆಯ ಹೇಮಂತ್  ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!