ತುರುವೇಕೆರೆ : ತಾಲೂಕಿನ ಬಾಣಸಂದ್ರ ಗ್ರಾಮದ ಮುಖ್ಯರಸ್ತೆಯಲ್ಲಿ ಕ್ರಷರ್ ಲಾರಿಗಳ ಓಡಾಟದಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು ಕೂಡಲೇ ಲಾರಿ ಸಂಚಾರವನ್ನು ನಿರ್ಬಂದಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮದ ಮಹಿಳೆ ರಂಗಮ್ಮ ಮಾತನಾಡಿ ಗ್ರಾಮದ ರಸ್ತೆಯಲ್ಲಿ ಕ್ರಷರ್ ಲಾರಿಗಳು ವೇಗವಾಗಿ ಸಾಗುತ್ತವೆ. ಇದರಿಂದಾಗಿ ಗ್ರಾಮದ ಹೊರವಲಯದಲ್ಲಿರುವ ರಸ್ತೆ ಸಂಪೂರ್ಣವಾಗ ಹಾಳಾಗಿದೆ. ನಮ್ಮ ಜಮೀನುಗಳಿಗೆ ಹಾಗೂ ಹಸುಗಳನ್ನು ಮೇಯಿಸಲು ಇದೇ ದಾರಿಯನ್ನು ಗ್ರಾಮಸ್ಥರು ಅವಲಂಬಿಸಬೇಕಿದೆ. ಹಸುಗಳ ಗೊರಸಿಗೆ ಜಲ್ಲಿಕಲ್ಲುಗಳಿಂದ ರಸ್ತೆ ಗಾಯವಾಗಿ ಜ್ವರದಿಂದ ಬಳಲುತ್ತಿವೆ. ಜನತೆ ಓಡಾಡಲು ಭಯಪಡುವಂತಾಗಿದೆ ಎಂದು ದೂರಿದರು.
ಗ್ರಾ.ಪಂ. ಸದಸ್ಯ ಪ್ರಕಾಶ್ ಮಾತನಾಡಿ ಓವರ್ ಲೋಡ್ ತುಂಬಿಕೊಂಡು ಗ್ರಾಮದ ಮೂಲಕ ಸಾಗುವ ಲಾರಿಗಳಿಂದ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ.ಮಳೆ ನೀರು ಗುಂಡಿಗಳಲ್ಲಿ ಶೇಖರಣೆಗೊಂಡು ದ್ವಿಚಕ್ರವಾಹನ ಸವಾರರು ಆಯತಪ್ಪಿ ಕೈ ಕಾಲುಗಳನ್ನು ಮುರಿಸುಕೊಳ್ಳುವಂತಾಗಿದೆ.ಗ್ರಾಮದ ಮುಖಾಂತರ ಸಾಗುವ ಲಾರಿಗಳ ಸಂಖ್ಯೆ ಹೆಚ್ಚಾಗಿದ್ದು ವೃದ್ದರು,ಮಕ್ಕಳು ಮುಂದಿನ ಮನೆಗಳತ್ತ ಹೆಜ್ಜೆ ಹಾಕುವುದು ದುಸ್ತರವಾಗಿದೆ. ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಆಗಮಿಸಿ ಗ್ರಾಮದ ಮೂಲಕ ಸಾಗುವ ಲಾರಿಗಳ ಸಂಚಾರವನ್ನು ನಿರ್ಬಂದಿಸುವರೆಗೂ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.
ಕ್ರಷರ್ ಲಾರಿ ಸಂಚಾರಕ್ಕೆ ನಿರ್ಬಂದ:
ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸಾರಿಗೆ ಇಲಾಖಾದಿಕಾರಿಗಳು ಆಗಮಿಸಿ ಗ್ರಾಮಸ್ಥರು ಅಹವಾಲು ಆಲಿಸಿದರು. ಗ್ರಾಮದ ಮೂಲಕ ಕ್ರಷರ್ ಲಾರಿಗಳು ಸಂಚರಿಸುವುದನ್ನು ನಿರ್ಬಂದಿಸುವ ಭರವಸೆ ನೀಡಿದರು. ಅಧಿಕಾರಿಗಳ ಭರವಸೆಗೆ ಒಪ್ಪಿದ ಗ್ರಾಮಸ್ಥರುಗಳು ಪ್ರತಿಭಟನೆ ಸ್ಥಗಿತಗೊಳಿಸಿದರು.
ಪ್ರತಿಭಟನೆಯಲ್ಲಿ ಶೇಷೇಗೌಡ,ಪ್ರವೀಣ,ಪ್ರಕಾಶ್, ಪುಟ್ಟೇಗೌಡ,ಹೇಮಂತ್,ಗಂಗಾದರ್,ರಾಜು, ಸುಶೀಲಮ್ಮ, ರುದ್ರಾಣಮ್ಮ, ವೀಣಾ,ರತ್ನಮ್ಮ, ಪಾಂಡುರಂಗೇಗೌಡ ಸೇರಿದಂತೆ ಅನೇಕರಿದ್ದರು.