ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ವೆಲ್ಕಂ.. ಹೋಗುವವರಿಗೆ ಗುಡ್ ಲಕ್.. : ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್


ಪಕ್ಷದಲ್ಲಿ ಎಲ್ಲವೂ ಸರಿ ಎನ್ನಲಾಗದು. ಗುಬ್ಬಿ ಕಾಂಗ್ರೆಸ್ ನಲ್ಲಿ ಅಪಸ್ವರ ಇರುವುದು ಸತ್ಯ. ಶೀಘ್ರದಲ್ಲೇ ಸರಿಪಡಿಸಿ ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಆಯ್ಕೆ ಮಾಡುವುದು ಶತ ಸಿದ್ದ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ನಿಟ್ಟೂರು ಪುರ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಭಾರತ ಐಕ್ಯತಾ ಯಾತ್ರಾ ಪೂರ್ವಭಾವಿ ಸಭೆ ನಂತರದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ ಕಾಂಗ್ರೆಸ್ ನಲ್ಲಿ ಯಾವ ಗೊಂದಲವಿಲ್ಲ. ಪಕ್ಷ ಸಿದ್ದಾಂತ ಒಪ್ಪಿ ಬಂದವರನ್ನು ಅಭೂತ ಪೂರ್ವ ವೆಲ್ಕಮ್ ಹೇಳುತ್ತೇವೆ. ಪಕ್ಷ ಬಿಡುವವರಿಗೆ ಗುಡ್ ಬೈ ಹಾಗೂ ಗುಡ್ ಲಕ್ ಹೇಳುತ್ತೇವೆ ಎಂದು ಮಾರ್ಮಿಕವಾಗಿ ಎಸ್ಪಿಎಂ ಹಾಗೂ ಎಂಡಿಎಲ್ ಅವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ಹೇಳಿದರು.

ಇಡೀ ವಿಶ್ವವೇ ಗಮನಿಸುತ್ತಿರುವ ರಾಹುಲ್ ಗಾಂಧಿ ಅವರ ಐಕ್ಯತಾ ಪಾದಯಾತ್ರೆ 3570 ಕಿಮೀ ನಡೆಯಲಿದೆ.ಜಿಲ್ಲೆಯಲ್ಲಿ ನಾಲ್ಕು ದಿನದ ಈ ಯಾತ್ರೆ ಮೂರು ರಾತ್ರಿಗಳ ವಾಸ್ತವ್ಯಕ್ಕೆ ಕಾರಣವಾಗಲಿದೆ. ಕಲ್ಲೂರು ಕ್ರಾಸ್ ಮೂಲಕ ತಾಲ್ಲೂಕಿಗೆ ಅಕ್ಟೋಬರ್ 9 ರಂದು ಆಗಮಿಸಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಾತ್ರೆ ಯಶಸ್ವಿಗೊಳಿಸಿ ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕುವಂತೆ ಕರೆ ನೀಡಿದರು.

ಯಾತ್ರೆಯಲ್ಲಿ ದೇಶದ ಯುವಕರು, ರೈತರನ್ನು ಸಂಘಟಿಸಿ ಅವರಿಗೆ ವಾಸ್ತವದ ಸ್ಥಿತಿ ತಿಳಿಸುವ ಉದ್ದೇಶ ಹೊಂದಿದ್ದು, ಜೊತೆಗೆ ಪ್ರಜಾಪ್ರಭುತ್ವದ ಮೇಲಿನ ಸರ್ವಾಧಿಕಾರಿ ಧೋರಣೆ ಮಾಡುತ್ತಿರುವ ಬಿಜೆಪಿ ದುರಾಡಳಿತ ತಿಳಿಸಲಾಗುವುದು. ಜಿ ಎಸ್ ಟಿ ಹೆಸರಿನಲ್ಲಿ ಸಾಮಾನ್ಯನ ಲೂಟಿ ಮಾಡುತ್ತಿರುವ ಬಿಜೆಪಿ ಸಂವಿಧಾನವನ್ನೇ ತಿದ್ದುಪಡಿ ಮಾಡುತ್ತಾ ಕೋಮು ಪ್ರಚೋದನೆ ನಡೆಸಿದೆ. ಈ ಎಲ್ಲಾ ವಿದ್ಯಮಾನ ಜನರಿಗೆ ತಿಳಿಸುವ ಈ ಬೃಹತ್ ಯಾತ್ರೆ ಅತೀ ದೊಡ್ಡ ಪಾದಯಾತ್ರೆ ಎನಿಸಿದೆ ಎಂದರು.

ಯಾತ್ರೆ ಪೂರ್ವ ತಯಾರಿ ವೀಕ್ಷಣೆ ವಿಚಾರದಲ್ಲಿ ಸಲ್ಲದ ವದಂತಿ ಸೃಷ್ಟಿ ಆಗುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಆಗಮನ ವೇಳೆ ಸಿದ್ದರಾಮಯ್ಯ ಅವರು ಸದನದಲ್ಲಿ ಇರಬೇಕಿತ್ತು. ನಾನು ಕೇರಳ ಉಸ್ತುವಾರಿ ವಹಿಸಿದ್ದೆ. ಕೆ.ಎನ್.ರಾಜಣ್ಣ ಅವರು ಚಿತ್ರದುರ್ಗ ಜವಾಬ್ದಾರಿ ವಹಿಸಿದ್ದರು. ಹೀಗೆ ಜವಾಬ್ದಾರಿ ಇದ್ದ ಕಾರಣ ಬೇರೆ ಸಮಯದಲ್ಲಿ ಬರುತ್ತಿದ್ದಾರೆ ಅಷ್ಟೇ ಎಂದು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಷಡಕ್ಷರಿ, ಡಾ.ರಫೀಕ್ ಅಹಮದ್, ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಕೆಪಿಸಿಸಿ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ, ಜಿಲ್ಲಾ ಕಾರ್ಯದರ್ಶಿ ಶಂಕರಾನಂದ, ಭರತಗೌಡ, ಗುಬ್ಬಿ ಬ್ಲಾಕ್ ಅಧ್ಯಕ್ಷ ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಕೆ.ಆರ್.ತಾತಯ್ಯ, ಸಲೀಂಪಾಷಾ, ಶಿವಾನಂದ್, ಮಹಿಳಾ ಘಟಕದ ಸೌಭಾಗ್ಯಮ್ಮ, ರೂಪಾ, ವಸಂತಮ್ಮ, ಸಿ.ಟಿ.ಶಾರದ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!