ಗುಬ್ಬಿ: ಮಾರಣಾಂತಿಕ ಎನಿಸಿದ ರೇಬೀಸ್ ವೈರಾಣು ಪ್ರಾಣಿಜನ್ಯ ರೋಗವಾಗಿ ಮನುಷ್ಯರಲ್ಲಿ ಬಹುಬೇಗ ಒಳಹೊಕ್ಕು ಪ್ರಾಣ ಹಾನಿ ಮಾಡುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹುಚ್ಚು ನಾಯಿಗಳ ಹಾವಳಿ ತಪ್ಪಿಸಲು ರೇಬೀಸ್ ತಡೆಯ ಲಸಿಕೆಯನ್ನು ತಾಲ್ಲೂಕಿನ 3120 ನಾಯಿಗಳಿಗೆ ನೀಡಲು ಪಶು ವೈದ್ಯ ತಂಡ ಕೆಲಸ ಮಾಡುತ್ತಿದೆ ಎಂದು ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಹೇಶ್ ತಿಳಿಸಿದರು.
ಪಟ್ಟಣದ ಬಿಲ್ಲೇಪಾಳ್ಯ ಬಡಾವಣೆಯಲ್ಲಿ ಸಾಕು ನಾಯಿಗಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸೂಕ್ತ ಚಿಕಿತ್ಸೆ ಇಲ್ಲದ ರೇಬೀಸ್ ರೋಗ ನಗರ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬೀದಿ ನಾಯಿಗಳಲ್ಲಿ ವೈರಸ್ ಬಹುಬೇಗ ಕಾಣುತ್ತದೆ ಎಂದು ಹೇಳಿದರು.
ಹುಚ್ಚು ನಾಯಿ ಎನ್ನುವ ಮಾತು ಸರ್ವೇ ಸಾಮಾನ್ಯವಾದದು. ಪ್ರಾಣಿಗಳಲ್ಲಿ ನಡವಳಿಕೆ ಬದಲಿಸುವ ವೈರಾಣು ಗುರಿ ಇಲ್ಲದೆ ಓಡುವುದು, ಆಕ್ರಮಣ ಮಾಡುವುದು, ಕಚ್ಚುವುದು ಹಾಗೂ ಖಿನ್ನತೆಗೆ ಒಳಗಾಗುವ ಲಕ್ಷಣ ಕಾಣುತ್ತವೆ ಎಂದ ಅವರು ಅತಿಯಾದ ಜೊಲ್ಲು ಸುರಿಯುವುದು ಹಾಗೂ ಬೊಗಳುವ ಧ್ವನಿಯಲ್ಲಿ ಬದಲಾವಣೆ ಸಹ ಕಾಣುತ್ತದೆ. ಆಹಾರ ತಿನ್ನದೆ ಅಸಾಮಾನ್ಯ ವಸ್ತುಗಳನ್ನು ಕಚ್ಚುತ್ತಿರುತ್ತದೆ. ಈ ಲಕ್ಷಣ ಕಂಡ ಗರಿಷ್ಠ ಹತ್ತು ದಿನದಲ್ಲಿ ಮೃತ ಪಡುತ್ತವೆ ಎಂದು ವಿವರಿಸಿದರು.
ನಾಯಿ ಕಚ್ಚಿದ ಸಂದರ್ಭದಲ್ಲಿ ಶುದ್ಧ ನೀರಿನಲ್ಲಿ 15 ನಿಮಿಷ ಸೋಪಿನಿಂದ ಚೆನ್ನಾಗಿ ತೊಳೆದು ಪ್ರಾಥಮಿಕ ಚಿಕಿತ್ಸೆ ನೀಡಬೇಕು. ಹತ್ತಿರದ ಡಾಕ್ಟರ್ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದು ಲಸಿಕೆ ಪಡೆಯುವುದು ಒಳಿತು. ಯಾವುದೇ ಕಾರಣಕ್ಕೂ ತಾತ್ಸಾರ ಮಾಡದಂತೆ ಸಲಹೆ ನೀಡಿದ ಅವರು ತಾಲ್ಲೂಕಿನಲ್ಲಿ 3120 ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಗುತ್ತಿದೆ. ನಗರ ಸೇರಿದಂತೆ ಹೋಬಳಿಯಲ್ಲಿ 640 ನಾಯಿಗಳಿಗೆ ಲಸಿಕೆ ನೀಡಲಾಗುತ್ತಿದ್ದು, ತಾಲ್ಲೂಕಿನ ಸಾಕು ಪ್ರಾಣಿಗಳ ಪ್ರಿಯರು ಹತ್ತಿರದ ಪಶು ವೈದ್ಯ ಆಸ್ಪತ್ರೆ ಸಂಪರ್ಕಿಸಿ ರೇಬೀಸ್ ತಡೆಗೆ ಸಹಕರಿಸಲು ಮನವಿ ಮಾಡಿದರು.
ಈ ಲಸಿಕೆ ಹಾಕುವ ಕಾರ್ಯ ತಂಡದಲ್ಲಿ ಡಾ.ವಿಜಯಲಕ್ಷ್ಮೀ, ಡಾ.ಉಮೇಶ್, ಡಾ.ಶಶಿಕಲಾ ಜಾನುವಾರು ಅಭಿವೃದ್ದಿ ಅಧಿಕಾರಿ ಶಶಿಕುಮಾರ್, ನಾಗರಾಜ್ ಇತರರು ಇದ್ದರು.