ಸೆ.30ರವರೆಗೆ ಉಚಿತ ಕೋವಿಡ್ ಮುನ್ನೆಚ್ಚರಿಕೆ ಲಸಿಕೆ : ವ್ಯಾಪಕ ಪ್ರಚಾರಕ್ಕೆ ಜಿಲ್ಲಾಧಿಕಾರಿ ಸೂಚನೆ


ತುಮಕೂರು: ಹದಿನೆಂಟರಿಂದ ಅರವತ್ತು ವರ್ಷದೊಳಗಿರುವವರಿಗೆ ಸೆಪ್ಟೆಂಬರ್ 30 2022 ರವರೆಗೆ ಉಚಿತ ಕೋವಿಡ್ ಮುನ್ನೆಚ್ಚರಿಕೆ ಲಸಿಕೆಯನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಈ ಅವಧಿಯೊಳಗಾಗಿ ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ/ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ತಪ್ಪದೆ ಮುನ್ನೆಚ್ಚರಿಕೆ ಲಸಿಕೆ ಹಾಕಿಸಿಕೊಳ್ಳುವಂತೆ ಅಧಿಕಾರಿಗಳು ತಮ್ಮ ಆಡಳಿತ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾ/ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ದಿನಗಳ ಮುಂಜಾಗ್ರತಾ ಲಸಿಕಾ ಮೇಳ ಆಯೋಜಿಸಿದ್ದು, ಆಯಾ ತಾಲ್ಲೂಕು ತಹಶೀಲ್ದಾರ್‌ಗಳು, ಆರೋಗ್ಯಾಧಿಕಾರಿಗಳು, ಪಿಡಿಓಗಳು, ಗ್ರಾಮ ಸಹಾಯಕರು ಉಚಿತ ಮುನ್ನೆಚ್ಚರಿಕೆ ಡೋಸ್ ಕುರಿತಂತೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್(ಆಭಾ) ಕಾರ್ಡ್ ಮೂಲಕ ನಾಗರೀಕರು ಉಚಿತ ಆರೋಗ್ಯ ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ ಕಾರ್ಡ್ ವಿತರಣೆ ವೇಗ ಪಡೆದುಕೊಳ್ಳಬೇಕು. ಒಂದು ವಾರದೊಳಗೆ ಗರಿಷ್ಠ ಒಂದು ಲಕ್ಷ ಆಭಾ ಕಾರ್ಡುಗಳನ್ನು ನೀಡಲು ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.
ಕೋವಿಡ್-19ಗೆ ಸಂಬಂಧಿಸಿದಂತೆ ನಿಗಧಿಪಡಿಸಿರುವ ಗುರಿಯಷ್ಟು ಗಂಟಲು ದ್ರವ ಸಂಗ್ರಹಣೆ ಮಾಡಬೇಕು, ಶಿರಾ, ತಿಪಟೂರು ನಗರಗಳಲ್ಲಿ ಈ ಪ್ರಮಾಣ ತುಸು ಹೆಚ್ಚಿಸಬೇಕು. 12-17 ವಯೋಮಾನದ ಮಕ್ಕಳ ಲಸಿಕಾಕರಣ ಶೇ 100ರಷ್ಟು ಗುರಿ ತಲುಪಬೇಕು ಎಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಸೆಪ್ಟೆಂಬರ್ 17 ರಿಂದ ಆಕ್ಟೋಬರ್ 2ರವರೆಗೆ ಆರೋಗ್ಯ ಕರ್ನಾಟಕ ಅಭಿಯಾನ ನಡೆಯುತ್ತಲಿದ್ದು, ಈ ಅಭಿಯಾನದ ಅಂಗವಾಗಿ ಜಿಲ್ಲೆಯ 1300 ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರವನ್ನು 6 ತಿಂಗಳವರೆಗೆ ನೀಡಬೇಕಿದ್ದು, ಈ ನಿಟ್ಟಿನಲ್ಲಿ ಆಸಕ್ತರು ರೋಗಿಗಳಿಗೆ 6 ತಿಂಗಳ ಕಾಲ ಪೌಷ್ಟಿಕ ಆಹಾರ ನೀಡುವ ಅಭಿಯಾನದಲ್ಲಿ ಭಾಗವಹಿಸಿ, ರೋಗಿಗಳಿಗೆ ಬೇಕಾಗಿರುವ ಪೂರಕ ಆಹಾರ ನೀಡಬಹುದಾಗಿದೆ ಎಂದು ಜಿಲ್ಲಾ ಟಿಬಿ ನಿಯಂತ್ರಣಾಧಿಕಾರಿ ಡಾ|| ಸನತ್ ಕುಮಾರ್ ಅವರು ಸಭೆಯ ಮುಂದಿಟ್ಟಾಗ ಜಿಲ್ಲಾಧಿಕಾರಿಗಳು, ಅಭಿಯಾನದ ಯಶಸ್ಸಿಗೆ ಹಾರೈಸಿ ಜಿಲ್ಲಾಡಳಿತದ ವತಿಯಿಂದಲೂ ಸೂಕ್ತ ನೆರವು ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಆಹವಾಲು ಹೊತ್ತು ತರುವ ಸಾರ್ವಜನಿಕರಿಗೆ ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಸೂಕ್ತ ಹಿಂಬರಹ ನೀಡಬೇಕು ಎಂದು ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರಲ್ಲದೇ, ಅಂಗನವಾಡಿ ಕೇಂದ್ರಗಳಿಗೆ ನಿವೇಶನ ದಾನ ನೀಡಿದವರಿಗೆ ಮುಂದಿನ ಜಿಲ್ಲಾಧಿಕಾರಿ ನಡೆ ಕಾರ್ಯಕ್ರಮದಲ್ಲಿ ಗೌರವಿಸುವ ಕೆಲಸವಾಗಬೇಕು ಎಂದು ತಿಳಿಸಿದರು. ಅಂತೆಯೇ ಸರ್ಕಾರಿ ಶಾಲಾ ಕಟ್ಟಡಗಳಿಗೆ ಸಂಬಂಧಿಸಿದಂತೆ ಆಯಾ ಶಾಲಾ ಮುಖ್ಯೋಪಾಧ್ಯಾಯರುಗಳಿಗೆ ನಿವೇಶನದ ಖಾತೆ ವಿತರಿಸುವ ಕೆಲಸವೂ ಸಹ ಅಂದೇ ಆಗಬೇಕು ಎಂದು ಸೂಚಿಸಿದರು.
ಕೇಂದ್ರ ಚುನಾವಣಾ ಆಯೋಗವು ಮತದಾರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವಂತೆ ತಿಳಿಸಿದ್ದು, ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದ ಅವರು, ಎಲ್ಲಾ ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಾದ ಪಿಡಿಓ, ಗ್ರಾಮಲೆಕ್ಕಾಧಿಕಾರಿಗಳಿಗೆ ಗುರಿ ನಿಗಧಿ ಮಾಡಿ ಶೇ.1೦೦ರಷ್ಟು ಪ್ರಗತಿ ಸಾಧಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿಗಳು, ಪೌರಾಯುಕ್ತರು ಅಗತ್ಯ ಕ್ರಮವಹಿಸಬೇಕು ಎಂದರು. ತುಮಕೂರು ಪಾಲಿಕೆ ವತಿಯಿಂದ ಅಭಿಯಾನದ ರೀತಿಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ಕೆ ಈ ವಾರದಲ್ಲೇ ಚಾಲನೆ ಸಿಗಬೇಕು ಎಂದರು.
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿದೆ. ರೈತರ ಬೆಳೆ ನಷ್ಟವಾದ ಬಗ್ಗೆ ಮಾಹಿತಿಯನ್ನು ಪರಿಹಾರ ಪೋರ್ಟಲ್‌ನಲ್ಲಿ ತುಂಬಬೇಕು. ಬಾಕಿ ಇರುವ ಬೆಳೆಹಾನಿ ಪ್ರದೇಶಗಳ ರೈತರ ಪೂರಕ ದಾಖಲೆಗಳನ್ನು ಪೋರ್ಟಲ್ ನಲ್ಲಿ ನಮೂದಿಸಬೇಕು ಎಂದು ಜಿಲ್ಲೆಯ ಎಲ್ಲಾ ತಹಸಿಲ್ದಾರ್ ಗಳಿಗೆ ಸೂಚಿಸಿದರು.
ಕಂದಾಯ ಇಲಾಖೆಯ ರೆಕಾರ್ಡ್ ರೂಮ್‌ನಲ್ಲಿ ಎಬಿಸಿಡಿಇ ಕೆಟಗೆರಿವಾರು ದಾಖಲೆಗಳನ್ನು ಡಿಜಿಟಲೀಕರಣ ಮಾಡಬೇಕು. ಈ ಮೂಲಕ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ 3 ತಿಂಗಳೊಳಗೆ ದಾಖಲಿಕರಣವಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಒದಗಿಸಲಾಗಿರುವ ಅನುದಾನ ನಿಗಧಿತ ಅವಧಿಯೊಳಗೆ ಖರ್ಚು ಮಾಡಬೇಕು. ಇಲ್ಲವಾದರೇ ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ ಅಜಯ್, ಡಿಡಿಎಲ್‌ಆರ್ ಸುಜಯ್ ಕುಮಾರ್, ಡಿಹೆಚ್‌ಓ ಡಾ|| ಎನ್.ಮಂಜುನಾಥ್, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ. ವೀಣಾ, ತಹಶೀಲ್ದಾರ್ ಮೋಹನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!