ಬೆಂಗಳೂರು: ಎಲ್ಲಾ ಸಮಾಜವನ್ನು ಒಂದೇ ರೀತಿಯಾಗಿ ಕಂಡ ಏಕೈಕ ಶ್ರೀಗಳು ಅಂದರೆ ಸಿದ್ದಗಂಗೆ ಶಿವಕುಮಾರ ಸ್ವಾಮೀಜಿ,
ಅವರನ್ನು ನೋಡಿಕೊಂಡು ಅವರೊಂದಿಗೆ ಬದುಕಿದ್ದೇ ನಮ್ಮ ಸಾರ್ಥಕತೆ ಎಂಬ ಭಾವ ನಮ್ಮದು ಎಂದು ಸಿದ್ಧಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಸಾರ್ಥಕ ಭಾವನೆ ವ್ಯಕ್ತಪಡಿಸಿದರು.
ದಾಸರಹಳ್ಳಿವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಬ್ಬಿಗೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿ ಅನಾವರಣ
ಹಾಗೂ ಅಬ್ಬಿಗೆರೆ- ಚಿಕ್ಕಬಾಣಾವರ ಮುಖ್ಯರಸ್ತೆಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ರಸ್ತೆ ಎಂಬ ನಾಮಫಲಕ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸುಶಿಕ್ಷಿತ ಪ್ರಜೆಯನ್ನು ಸಮಾಜಕ್ಕೆ ನೀಡಬೇಕು ಹಾಗೂ ಭಕ್ತಾದಿಗಳಿಗೆ ಪ್ರಸಾದ ನೀಡುವುದೇ ಶಿವಕುಮಾರ ಸ್ವಾಮೀಜಿ ಅವರ ಗುರಿಯಾಗಿತ್ತು.ಅವರ ಚಿಂತನೆಯನ್ನು ನಾವೂ ಸಹ ಸಾಕಾರಗೊಳಿಸಬೇಕಿದೆ ಎಂದು ಸಿದ್ಧಲಿಂಗ ಸ್ವಾಮೀಜಿ ಕರೆ ನೀಡಿದರು.

ಯುವಜನತೆ ಶಿವಕುಮಾರ ಸ್ವಾಮೀಜಿ ಅವರ ಆಶಯದಂತೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಕರವಾಗಿದ್ದರೆ ಮಾತ್ರ ಉತ್ತಮ ಸಾಮಾಜ ಕಟ್ಟಲು ಸಾಧ್ಯ ಎಂದು ಸಿದ್ಧಗಂಗಾ ಶ್ರೀಗಳು ತಿಳಿಸಿದರು.
ವಿಭೂತಿಪುರ ಮಠದ ಮಹಾಂತಲಿಂಗಶ್ರೀಗಳು,ಮೇಲಣಗವಿ ಮಠದ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು,
ಬೆಂಗಳೂರು ನಗರ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಜಿ ಮರಿಸ್ವಾಮಿ,
ದಾಸರಹಳ್ಳಿ ಶಾಸಕ ಆರ್.ಮಂಜುನಾಥ್, ವೀತಶೈವ ಲಿಂಗಾಯಿತ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ ಮನೋಹರ್,ನಗರಸಭೆ ಮಾಜಿ ಅಧ್ಯಕ್ಷ ಕೆ ಸಿ ಅಶೋಕ್ ಮತ್ತು ಎಲ್ . ಗಂಗಾಧರ್ , ಉಮಾಪ್ರಿಯಾ, ಸಿ . ಮಂಜುನಾಥ್ , ಎನ್. ಶಿವಕುಮಾರ್, ದಿನೇಶ್ , ಎನ್. ಮಹೇಶ್ ಕುಮಾರ್ , ಬಿಬಿಎಂಪಿ ಮಾಜಿ ಸದಸ್ಯ ನಾಗಭೂಷಣ್ ಮೊದಲಾದವರು ಉಪಸ್ಥಿತರಿದ್ದರು.