ವೃತ್ತಿ ಜೀವನದಲ್ಲಿ ಒತ್ತಡದಿಂದ ದೂರವಿರುವ ಬಗ್ಗೆ ಅರಿವು ಅವಶ್ಯ : ಭಾರತಿ ಶ್ರೀನಿವಾಸ್

ಗುಬ್ಬಿ: ವ್ಯಕ್ತಿ ವಿಕಸನ ಬಗ್ಗೆ ಮನದಟ್ಟು ಮಾಡಿಕೊಳ್ಳುವ ವಿಚಾರವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಶ್ರೀಮತಿ ಮಂಗಳಮ್ಮ ರಾಮೇಗೌಡ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಭಾರತಿ ಶ್ರೀನಿವಾಸ್ ಕರೆ ನೀಡಿದರು.

ಪಟ್ಟಣದ ಸ್ತ್ರೀ ಶಕ್ತಿ ಸಂಘದ ಸಭಾಂಗಣದಲ್ಲಿ ಶ್ರೀಮತಿ ಮಂಗಳಮ್ಮ ರಾಮೇಗೌಡ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ಹಾಗೂ ಅನಿಕೇತನ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘ ಆಯೋಜಿಸಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ನಾಲ್ಕು ದಿನದ ವ್ಯಕ್ತಿ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸದಾ ಒತ್ತಡದ ಬದುಕು ಸಾಗಿಸುವ ಅಂಗನವಾಡಿ ಶಿಕ್ಷಕಿಯರಿಗೆ ಸೂಕ್ತ ಮಾರ್ಗದರ್ಶನ ಅಗತ್ಯವಿದೆ ಎಂದರು.

ಬದುಕು ಕಟ್ಟಿಕೊಳ್ಳುವ ವೃತ್ತಿಯಲ್ಲಿ ಶ್ರದ್ದೆ ಸಹಜವಾಗಿ ಬೆಳೆಯಬೇಕು. ಆದರೆ ಗರ್ಭದಲ್ಲಿರುವ ಮಗುವಿನಿಂದ ಅದು ವರ್ಷ ವಯಸ್ಸಿನ ಮಕ್ಕಳ ಜವಾಬ್ದಾರಿ ಹೊತ್ತ ತಾಯಂದಿರಿಗೆ ಅರಿವು ಮೂಡಿಸುವ ಜವಾಬ್ದಾರಿ ಕೆಲಸ ನಿರ್ವಹಿಸುವ ಕಾರ್ಯಕರ್ತೆಯರ ಕರ್ತವ್ಯ ಅರ್ಥಪೂರ್ಣ ಸೇವೆ ಎನಿಸಿದೆ. ಕನಿಷ್ಠ ವೇತನದಿಂದ ಜೀವನ ರೂಪಿಸಿಕೊಳ್ಳುವ ಜೊತೆಗೆ ದೇಶದ ಮುಂದಿನ ಪ್ರಜೆಗಳ ಆರೈಕೆ ಮೂಲಕ ಆರೋಗ್ಯ ಸಮಾಜ ನಿರ್ಮಾಣದ ಜವಾಬ್ದಾರಿ ಅವರ ಮೇಲಿದೆ ಎಂದ ಅವರು ಒತ್ತಡದ ಅವರ ಮನಸ್ಥಿತಿ ಹತೋಟಿಗೆ ಮೆಡಿಟೇಶನ್ ಕೂಡಾ ಉತ್ತಮ ಅಸ್ತ್ರ. ಹಾಗಾಗಿ ಅದನ್ನು ಈ ಕಾರ್ಯಾಗಾರದಲ್ಲಿ ತಿಳಿಸಲಾಗುವುದು. ಕಲಿತಿದ್ದನ್ನು ಅನುಷ್ಠಾನಕ್ಕೆ ತರುವಲ್ಲಿ ಶಿಬಿರಾರ್ಥಿಗಳು ಮುಂದಾಗಬೇಕು ಎಂದರು.

ಸಿಡಿಪಿಓ ಮಂಜುನಾಥ್ ಮಾತನಾಡಿ ಮಕ್ಕಳ ಆರೈಕೆ ಜೊತೆಗೆ ಸರ್ಕಾರದ ಇತರೆ ಜವಾಬ್ದಾರಿ ಕೆಲಸಗಳಾದ ಗಣತಿ, ಚುನಾವಣೆ ಕೆಲಸವನ್ನು ಮಾಡುತ್ತಲೇ ಸದಾ ಒತ್ತಡದಲ್ಲೇ ಇರುತ್ತಾರೆ. ಈ ನಿಟ್ಟಿನಲ್ಲಿ ಅವರ ಕೆಲಸದ ಸರಳತೆ, ಶ್ರದ್ದೆ ಮೂಡಿಸುವ ವ್ಯಕ್ತಿತ್ವ ಗುಣ ಬೆಳೆಸುವ ನಾಲ್ಕು ದಿನಗಳ ಕಾರ್ಯಾಗಾರ ಇಡೀ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಅವಶ್ಯವಿದೆ. ನಿತ್ಯ 120 ಮಂದಿಗೆ ಎಲ್ಲಾ ಚಟುವಟಿಕೆ ಮೂಲಕ ಮನದಟ್ಟು ಮಾಡಲಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿ ಚೇತನ್ ಸಂಪ್ರದಾಯ ಮಾತನಾಡಿ ಉತ್ತಮ ಪ್ರಜೆ ಸೃಷ್ಟಿಸುವ ತಾಯಂದಿರ ಪಾತ್ರದ ಬಗ್ಗೆ ಇಲ್ಲಿ ಚಿಂತನೆ ವಿಮರ್ಶೆ ಮಾಡಲಾಗುತ್ತದೆ. ಮಕ್ಕಳ ಆರೈಕೆ ಅಷ್ಟೇ ಅಲ್ಲದೆ ತಾಯಂದಿರ ಬಗ್ಗೆ ಅರಿವು ಮೂಡಿಸುವ ಜೊತೆಗೆ ನಿತ್ಯ ಕಾಯಕ ಜೊತೆ ಮನೆಯ ಜವಾಬ್ದಾರಿ ನಿರ್ವಹಿಸುವ ಕಾರ್ಯಕರ್ತೆ ಬಗ್ಗೆ ಸಮಾಜ ಸಹ ಗೌರವ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಅನಿಕೇತನ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಅಂಗನವಾಡಿ ಮೇಲ್ವಿಚಾರಕರಾದ ಸ್ವರ್ಣ, ಹುಚ್ಚರಂಗಮ್ಮ, ನೇತ್ರಾ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!