ಮಧುಗಿರಿ ತಾಲೂಕಿನಿಂದ ಪಾದಯಾತ್ರೆಗೆ ಸಾವಿರಾರು ಜನರು ಸ್ವ ಇಚ್ಛೆಯಿಂದ ಭಾಗವಹಿಸಿ:ಕೆ.ಎನ್. ರಾಜಣ್ಣ

ಮಧುಗಿರಿ : ದೇಶದ ಅತೀ ದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದ್ದು,   ಶೇ.90 ರಷ್ಟು ಜನ ಬಿಜೆಪಿ ಸರ್ಕಾರದ ವಿರುದ್ದ  ಜನ ವಿರೋಧಿ ನೀತಿಗಳ ವಿರುದ್ದ ಅಸಮಾಧಾನಗೊಂಡಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ  ಮಯೂರ ಜಯಕುಮಾರ್  ತಿಳಿಸಿದರು. 

ಪಟ್ಟಣದ ಎಂ ಎನ್ ಕೆ ಸಮುದಾಯ ಭವನದಲ್ಲಿ ಬುಧವಾರ ತಾಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಶೇ.40 % ಕಮೀಷನ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಇವರ ಆಡಳಿತದ ವಿರುದ್ದ ಜನತೆ ಆಸಮಾಧಾಗೊಂಡಿದ್ದಾರೆ.  ಈಗಾಗಲೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ  ಕೈಗೊಂಡಿರುವ ರಾಹುಲ್ ಗಾಂಧೀಯವರ 3500 ಕಿ.ಮೀ ಪಾದಯಾತ್ರೆಗೆ   ದೇಶದಾದ್ಯಂತ ಭರ್ಜರಿ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಕರ್ನಾಟಕದಲ್ಲಿಯೂ  ಜನತೆ ನಿರೀಕ್ಷೆಗೂ ಮೀರಿ ಬೆಂಬಲಿಸುವ ವಿಶ್ವಾಸವಿದೆ. ಇವರ ಪಾದಯಾತ್ರೆಯಿಂದ ಕರ್ನಾಟಕದ ಬಿಜೆಪಿ ನಾಯಕರಿಗೆ ನಡುಕ ಉಂಟಾಗಿದ್ದು, ಕರ್ನಾಟಕದಲ್ಲಿಯೂ  ಪಾದಯಾತ್ರೆ ಯಶಸ್ವಿಯಾಗಲಿದೆ ಎಂದರು.

1947 ರಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ಕ್ಕಾಗಿ ಪಾದಯಾತ್ರೆ ನಡೆಸಿತ್ತು. ಈಗ 

ದೇಶದ ಜನರನ್ನು ಒಗ್ಗೂಡಿಸಲು ಭಾರತ ಜೋಡಣೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.  1930 ರಲ್ಲಿ ದೇಶದಲ್ಲಿ ಬ್ರಿಟೀಷರನ್ನು ಓಡಿಸಲು ಮಹಾತ್ಮ ಗಾಂಧೀಜೀ ಉಪ್ಪಿನ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಇದು ದೇಶದಾದ್ಯಂತ ಸಂಚಲನವುಂಟುಮಾಡಿತ್ತು. ಈಗ  ರಾಹುಲ್ ಗಾಂಧೀ ಹಮ್ಮಿಕೊಂಡಿರುವ  ಪಾದಯಾತ್ರೆಗೂ ದೇಶದಲ್ಲಿ ಅದೇ ವಾತಾವರಣ ಕಂಡು ಬರುತ್ತಿದೆ.   ಸ್ವಾತಂತ್ರ್ಯ ಕ್ಕಾಗಿ ಯಾವುದೇ ಆರ್.ಎಸ್.ಎಸ್. ನವರು ಪ್ರಾಣತ್ಯಾಗ ಮಾಡಿಲ್ಲ.‌ ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಜವಹರಲಾಲ್ ನೆಹರೂ ರವರ ಭಾವಚಿತ್ರವನ್ನು ಸರ್ಕಾರದ ವತಿಯಿಂದ ಹಮ್ಮಿಕೊಂಡಿದ್ದ 75 ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಚಿಕ್ಕದಾಗಿ ಅಳವಡಿಸುವ ಮೂಲಕ ದೇಶದ ಮಾಜಿ ಪ್ರಧಾನಿಯವರಿಗೆ ಅವಮಾನ ಮಾಡಿದ್ದಾರೆ.   ಬಿಜೆಪಿಯ ಅನೈತಿಕ ಕಾನೂನುಗಳು ದೇಶದ ಲಕ್ಷಾಂತರ ಜನತೆಗೆ ಅನಾನುಕೂಲವಾಗಿದ್ದು, ಇವರ ಕಾನೂನುಗಳು ಅಂಬಾನಿ ಮತ್ತು ಅದಾನಿಯಂತವರಿಗೆ ಮಾತ್ರ ಅನುಕೂಲವಾಗಿದ್ದು,  ಅದಾನಿ ಪ್ರಪಂಚದ 2 ನೇ ಶ್ರೀಮಂತರಾಗಿದ್ದಾರೆ. ಇಡೀ ದೇಶದ ಜನತೆಯೇ ರಾಹುಲ್ ಗಾಂಧಿಯವರ ಪಾದಯಾತ್ರೆಗೆ ಬೆಂಬಲಿಸುತ್ತಿದ್ದರೆ,  ದೇಶವನ್ನು ಒಡೆಯಲು ಹೊರಟಿರುವ ಬಿಜೆಪಿ ಬಾರತ ಜೋಡೋ ಯಾತ್ರೆಯನ್ನು ವಿರೋಧಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಮಾತನಾಡಿ  ಮಾಜಿ ಸಿಎಂ ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಆಚರಣೆ ಸಮಿತಿಗೆ ನನ್ನನ್ನು ಅಧ್ಯಕ್ಷರನ್ನಾಗಿಸಿದ್ದು ನನ್ನ ಕ್ಷೇತ್ರಕ್ಕೆ ಸಂದ ಗೌರವ. ಈ ಯಾತ್ರೆಯಲ್ಲಿ ತಾಲೂಕಿನಿಂದ ಸಾವಿರಾರು ಜನರು ಸ್ವ ಇಚ್ಛೆಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು ಅದೇ ರೀತಿ ರಾಹುಲ್ ಗಾಂಧಿಯವರು ಹಮ್ಮಿಕೊಂಡಿರುವ ಭಾರತ್ ಜೋಡೋ  ಯಾತ್ರೆಯಲ್ಲೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ.  ರಾಹುಲ್ ಗಾಂಧಿಯವರು ಹಮ್ಮಿಕೊಂಡಿರುವ ಪಾದಯಾತ್ರೆ ಐತಿಹಾಸಿಕ ಪಾದಯಾತ್ರೆಯಾಗಿದ್ದು, ಈ ಯಾತ್ರೆಯಲ್ಲಿ ಭಾಗವಹಿಸುವ ಅದೃಷ್ಟ ನಮಗೆ ಸಿಕ್ಕಿರುವುದು ನಮ್ಮ ಸುದೈವ.  ನಮ್ಮ ಜೀವನದಲ್ಲಿ ಮತ್ತೆ ಇಂತಹ ಅವಕಾಶಗಳು ದೊರೆಯುವುದಿಲ್ಲ ಈ ಕಾರ್ಯಕ್ರಮದಲ್ಲಿ  ಹಮ್ಮಿಕೊಳ್ಳುವ ಬೈಕ್ ರ್ಯಾಲಿಯಲ್ಲಿ ತಾಲೂಕಿನಿಂದ ಒಂದು ಸಾವಿರಕ್ಕೂ ಹೆಚ್ಚು ಬೈಕುಗಳ  ಮತ್ತು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ನಮ್ಮ ಕ್ಷೇತ್ರದಿಂದ ಅತೀ ಹೆಚ್ಚು ಜನ ಭಾಗವಹಿಸಿದ ಯಶಸ್ಸಿನ ಕೀರ್ತಿ ನಮಗೆ ದೊರೆಯುವಂತಾಗಬೇಕು ಎಂದರು. 

 ನನ್ನ ಅವಧಿಯಲ್ಲಿ  ಕ್ಷೇತ್ರದಲ್ಲಿ ಜನತೆ ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣ ನಿರ್ಮಿಸಿದ್ದೇನೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು,  ಜಿಲ್ಲೆಯಲ್ಲಿ ಕನಿಷ್ಠ 8 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗುವಂತೆ ಕಾರ್ಯಕರ್ತರು ಶ್ರಮವಹಿಸಬೇಕು ಎಂದರು. 

ಬಾಕ್ಸ್ : ಎಲ್ಲಾ ಜಾತಿಯ ಬಡವರ ಪರ ಕೆಲಸ ಮಾಡುವುದು ಕಾಂಗ್ರೆಸ್ ನ ದ್ಯೇಯ.  ಅದಾನಿಯನ್ನು ದೇಶದ 2 ನೇ ಶ್ರೀಮಂತರನ್ನಾಗಿ ಮಾಡಿದ್ದೇ ಬಿಜೆಪಿಯವರ ಸಾಧನೆ.  ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮುಕ್ತ ಭಾರತ ಮಾಡಲು ನಾವೆಲ್ಲ ಪಣ ತೊಡಬೇಕು. ದೇಶದಲ್ಲಿ ಮತೀಯ ಗಲಭೆಗಳನ್ನು ಕದಡುವ ಕೆಲಸವನ್ನು ಬಿಜೆಪಿ  ಮಾಡುತ್ತಿದ್ದು,

ಕುವೆಂಪುರವರು ಹೇಳಿದಂತೆ ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ನಮ್ಮದು ಗಾಂಧೀ ಹಿಂದುತ್ವವಾದರೆ  ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವ – ಕೆ.ಎನ್. ರಾಜಣ್ಣ, ಮಾಜಿ ಶಾಸಕ.

ಕಾರ್ಯಕ್ರಮದಲ್ಲಿ   ಮಾಜಿ ಸಂಸದ ಚಂದ್ರಪ್ಪ, ಜಿ‌.ಜೆ.ಆರ್. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಜಿ.ಪಂ ಮಾಜಿ ಸದಸ್ಯ ಜಿ.ಜೆ. ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷರಾದ ಎನ್. ಗಂಗಣ್ಣ, ಎಂ.ಕೆ. ನಂಜುಂಡಯ್ಯ, ಕೆ.ಪ್ರಕಾಶ್,  ಜಿಲ್ಲಾ  ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ, ಪುರಸಭೆ ಸದಸ್ಯರಾದ ಎಂ.ಎಸ್. ಚಂದ್ರಶೇಖರ್, ಮಂಜುನಾಥ್ ಆಚಾರ್, ಲಾಲಾಪೇಟೆ ಮಂಜುನಾಥ್, ಮುಖಂಡರಾದ ಆದಿನಾರಾಯಣ್ ರೆಡ್ಡಿ, ಇಂದಿರಾ ದೇನಾನಾಯ್ಕ, ಸುವರ್ಣಮ್ಮ, ಚಂದ್ರಮ್ಮ, ರವಿಕುಮಾರ್, ಉಮೇಶ್,   ಪಿ.ಸಿ. ಕೃಷ್ಣಾರೆಡ್ಡಿ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾರತಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ   ಇತರರಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!