ಮಧುಗಿರಿ: ಗ್ರಾಮೀಣ ಭಾಗದಲ್ಲಿನ ಬಡವರ ಮಕ್ಕಳಿಗೆ ವಿದ್ಯೆಯ ಹಸಿವು ನಿಗಿಸಿ ಜ್ಞಾನ ಹಂಚುತ್ತಿರುವ ಸರ್ಕಾರಿ ಶಾಲೆಗಳು ಅಗತ್ಯ ಸೌಕರ್ಯಗಳಿಲ್ಲದೆ ಸೊರಗುವಂತಾಗಿದೆ.
ಇದಕ್ಕೆ ಕಸಬಾ ಹೋಬಳಿಯ ಗಂಜಲಗುಂಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಆಮರಾವತಿ ಸರ್ಕಾರಿ ಪ್ರಾಥಮಿಕ ಶಾಲೆ ಉತ್ತಮ ಉದಾಹರಣೆಯಾಗಿದೆ.
ಈ ಶಾಲೆಯಲ್ಲಿ ಉತ್ತಮ ಕೊಠಡಿಗಳಿವೆ. ವಿಶಾಲವಾದ ಮೈದಾನವಿದೆ. ಆದರೆ, ಮಳೆ ಬಂದರೆ ಮೈದಾನದ ತುಂಬೆಲ್ಲಾ ಮಳೆಯ ನೀರು ನಿಲ್ಲುತ್ತಿರುವ ಕಾರಣ, ಕೆರೆಯಂತಾಗಿದ್ದು, ಮಕ್ಕಳು ಶಾಲೆಯ ಕೊಠಡಿಯೊಳಗೆ ಪ್ರವೇಶಿಸಲೂ ಸಾಧ್ಯವಾಗುವುದಿಲ್ಲ. ಶಾಲೆಯ ಆವರಣಕ್ಕೆ ಮಣ್ಣು ಹಾಕಿಸಬೇಕೆಂದು ಶಾಲೆಯ ಮುಖ್ಯ ಶಿಕ್ಷಕರು ಗ್ರಾಮ ಪಂಚಾಯಿತಿಗೆ, ತಾಲ್ಲೂಕು ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಆಫೀಸ್ ರೂಂಗೆ ಹೋಗಲು ಆಗುತ್ತಿಲ್ಲ: ಆಫೀಸ್ ರೂಮಿನ ಸುತ್ತ ನೀರು ನಿಂತಿರುವುದರಿಂದ ಬಾಗಿಲು ತೆಗೆಯಲು ಆಗುತ್ತಿಲ್ಲ. ಹಾಗಾಗಿ ಬಹಳ ದಿನಗಳಿಂದ ಆಫೀಸ್ ರೂಂ ಬಳಸುವುದನ್ನೇ ಬಿಟ್ಟು ಬೇರೆ ಕೋಣೆಯಲ್ಲಿ ದಾಖಲೆಗಳನ್ನು ಇಟ್ಟಿದ್ದೇವೆ ಎಂದು ಶಿಕ್ಷಕರೊಬ್ಬರು ಹೇಳಿದರು.
ಸೊಳ್ಳೆಗಳ ಕಾಟ: ಬಹಳ ದಿನಗಳಿಂದ ನೀರು ಶಾಲೆಯ ಆವರಣದ ತುಂಬಾ ನಿಂತಿರುವುದರಿಂದ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿ ಮಾರ್ಪಟ್ಟಿದೆ. ನೀರಿನಲ್ಲಿ ಹಾವುಗಳು ಕಾಣಿಸಿಕೊಂಡಿವೆ. ಶೌಚಾಲಯದ ಸುತ್ತ ನೀರು ನಿಂತಿರುವುದರಿಂದ ಶೌಚಾಲಯಕ್ಕೆ ಹೋಗಲು ವಿದ್ಯಾರ್ಥಿಗಳು-ಶಿಕ್ಷಕರು ಪರದಾಡಬೇಕಾಗುತ್ತದೆ.
ಸಾಂಕ್ರಮಿಕ ರೋಗದ ಆತಂಕ: ನೀರು ತುಂಬಾ ದಿನಗಳಿಂದ ನಿಂತಿರುವುದರಿಂದ ಸೊಳ್ಳೆಗಳು ಜಾಸ್ತಿಯಾಗಿ ವಿದ್ಯಾರ್ಥಿಗಳಿಗೆ ಕಚ್ಚಿದರೆ ರೋಗ ಹರಡುವ ಅಪಾಯ ಜಾಸ್ತಿಯೆಂದು ಶಿಕ್ಷಕರು ಆತಂಕ ವ್ಯಕ್ತಪಡಿಸುತ್ತಾರೆ.
ಶಾಲಾ ಆವರಣದಲ್ಲಿಯೇ ನೀರು ನಿಲ್ಲುವುದಕ್ಕೆ ಶಾಲೆಗೆ ಹೋಗುವುದಕ್ಕೆ ಕಷ್ಟವಾಗಿದೆ. ಪ್ರಾರ್ಥನೆ ಮಾಡಲು ತೊಂದರೆಯಾಗುತ್ತದೆ. ಈಗ ವಲಯ ಮಟ್ಟದ ಕ್ರೀಡಾಕೂಟ ಮುಗಿದಿದೆ. ನಂತರ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಸಿದ್ದರಾಗಲು ಸ್ಥಳೀಯ ಆಡಳಿತ ಜನಪ್ರತಿನಿಧಿಗಳು ಅಧಿಕಾರಿಗಳು ಸಮತಾಟ್ಟಾದ ಮೈದಾನ ಮಾಡಲು ಮುಂದಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಹಲವು ಸಮಸ್ಯೆಗಳಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಮತ್ತು ಅಗತ್ಯ ಸೌಕರ್ಯಗಳನ್ನು ಸ್ಥಳೀಯವಾಗಿ ಒದಗಿಸಲು ರಚಿಸಲಾದ ಶಾಲಾಭಿವೃದ್ಧಿ ಸಮಿತಿಗಳು ಶಾಲೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಎಸ್‌ಡಿಎಂಸಿ ಸದಸ್ಯರೊಬ್ಬರು.
ಪ್ರತಿ ಸಲ ಮಳೆ ಬಂದರೆ ಸಾಕು ಮೈದಾನದಲ್ಲಿ ನೀರು ಸಂಗ್ರಹವಾಗುತ್ತದೆ. ಇದರಿಂದ ಆಟ ಆಡಲು, ಸಂಚಾರ ಮಾಡಲು, ಪ್ರಾರ್ಥನೆ ಮಾಡಲು ಸಾಕಷ್ಟು ತೊಂದರೆಯಾಗುತ್ತದೆ ಎಂದು
ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿ ರಂಗನಾಥ್ ಮಾತನಾಡಿ, ಶಾಲೆಯ ಪಕ್ಕದ ಖಾಸಗಿ ಜಮೀನಿನಲ್ಲಿ ಮಳೆ ನೀರು ಸಂಗ್ರಹವಾಗಿರುವುದರಿಂದ ಅ ನೀರು ಶಾಲೆಯ ಆವರಣದೊಳಕ್ಕೆ ಬರುತ್ತಿವೆ. ಮುಂದೆ ನಡೆಯಲಿರುವ ಸಭೆಯಲ್ಲಿ ಈ ವಿಷಯ ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.