ಗುಬ್ಬಿ: ದೇಶದಲ್ಲಿ ಜನಸಂಖ್ಯೆ ಹೆಚ್ಚಿಸಿಕೊಳ್ಳುವ ಬದಲು ಪ್ರಜೆಗಳ ಸಂಖ್ಯೆ ಹೆಚ್ಚಿಸಬೇಕು. ಪ್ರಜೆಗಳಿಗೆ ಸಾಕಷ್ಟು ಜವಾಬ್ದಾರಿ ಇದೆ. ಸುಧಾರಿತ ಜೀವಿಗಳು ಎಂದೆನಿಸಿ ಪರಸ್ಪರ ಗೌರವಿಸುವ ಜೊತೆಗೆ ವಿಶ್ವಾಸದಲ್ಲಿ ದೇಶಕ್ಕೆ ದುಡಿಯುವ ಪ್ರಜೆಗಳಾಗಿದ್ದಲ್ಲಿ ಅಭಿವೃದ್ದಿ ಪಥದತ್ತ ಸಾಗಲಿದೆ ಎಂದು ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ವೀರೇಶಾನಾಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಮೀಡಿಯಾ ಬ್ಯಾಕ್ ಆಫೀಸ್ ಕಂಪೆನಿಯಲ್ಲಿ ರಿಮೂವಿ ವೆಬ್ ಸೈಟ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಮಾನವೀಯ ಮೌಲ್ಯಗಳ ಜೊತೆ ಸ್ವಾಭಿಮಾನ ಸ್ವಾವಲಂಬನೆ ಕಲಿಸುವ ಶಿಕ್ಷಣ ಇಂದು ಪ್ರಸ್ತುತವಿದೆ ಎಂದರು.
ಸಾರ್ವಜನಿಕ ರಂಗದ ಉದ್ದಿಮೆಗಳು ಬಹು ಬೇಗ ವಿನಾಶವಾಗುತ್ತಿದೆ. ಆದರೆ ಖಾಸಗಿ ರಂಗದಲ್ಲಿ ಉದ್ದಿಮೆಗಳು ದ್ವಿಗುಣ ಮಟ್ಟದಲ್ಲಿ ಬೆಳೆಯುತ್ತಿದೆ. ಇಲ್ಲಿನ ವ್ಯತ್ಯಾಸಕ್ಕೆ ಕಾರಣ ಹುಡುಕಬೇಕಿದೆ. ಆದರೆ ಉದ್ಯೋಗದಲ್ಲಿ ಶ್ರದ್ದೆ ಮೂಡಿಸುವ ಕೆಲಸ ಸಾರ್ವತ್ರಿಕ ರಂಗದಲ್ಲಿ ಕಾಣೆ ಆಗಿರುವುದು ಸಹ ಒಂದು ಕಾರಣ ಎಂದ ಅವರು ಗ್ರಾಮೀಣ ಭಾಗದಲ್ಲಿ ಕನಿಷ್ಠ ವಿದ್ಯಾರ್ಹತೆ ಹೊಂದಿರುವ ಯುವಕರಿಗೆ ಬದುಕು ಕಟ್ಟಿಕೊಟ್ಟ ಮೀಡಿಯಾ ಬ್ಯಾಕ್ ಆಫೀಸ್ ಕಂಪೆನಿ ತಾಂತ್ರಿಕತೆಯಿಂದ ಹೊರತಾದ ಸಾಮಾಜಿಕ ಕಳಕಳಿ ಹೊಂದಿರುವ ಬಗ್ಗೆ ತಿಳಿದು ಸಂತಸ ಆಗಿದೆ. ಕ್ರೀಡೆ, ಪರಿಸರ ಸೇರಿದಂತೆ ಇನ್ನಿತರ ಕಾರ್ಯಕ್ರಮ ಆಯೋಜಿಸಿ ಗುಬ್ಬಿ ತಾಲ್ಲೂಕಿನಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ ಎಂದರು.
ವಿಮರ್ಶಕ ಗೌರೀಶ್ ಅಕಿ ಮಾತನಾಡಿ ನಮ್ಮಲ್ಲಿನ ನೂ ಸರಿ ಪಡಿಸಿಕೊಳ್ಳದೆ ಇಡೀ ವ್ಯವಸ್ಥೆ ಬಗ್ಗೆ ಚರ್ಚಿಸುತ್ತೇವೆ. ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಆಗಿದೆ. ಹುಟ್ಟೂರಿನಲ್ಲಿ ಮೊದಲು ಏನಾದರೂ ಗುರುತರ ಕೆಲಸ ಮಾಡಬೇಕು. ಈ ಕಾರ್ಯ ಮಾಡಿದ ರಘು ಅವರು ಕಂಪೆನಿ ತೆರೆದು ನೂರಾರು ಮಂದಿ ಹಳ್ಳಿಗಾಡಿನ ಯುವಕರಿಗೆ ಉದ್ಯೋಗ ನೀಡಿರುವುದು ಶ್ಲಾಘನೀಯ ಎಂದರು.
ಮೀಡಿಯಾ ಬ್ಯಾಕ್ ಆಫೀಸ್ ವ್ಯವಸ್ಥಾಪಕ ನಿರ್ದೇಶಕ ಸುರುಗೇನಹಳ್ಳಿ ರಘು ಮಾತನಾಡಿ ಇಮೇಜ್ ಎಡಿಟಿಂಗ್ ಸರ್ವಿಸ್ ಮಾಡುವ ವೆಬ್ ಸೈಟ್ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 3 ರಂದು ವಿಶ್ವದಾದ್ಯಂತ ಲಾಂಚ್ ಆಗಲಿದೆ. ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ವೆಬ್ ಆಗಲಿದೆ ಎಂದರು.
ಮೀಡಿಯಾ ಬ್ಯಾಕ್ ಆಫೀಸ್ ಕಂಪೆನಿ ಸಿಇಓ ಕೆನಿಚಿರೋ ವಾತನಬೇ ಅವರು ಇದೇ ಸಂದರ್ಭದಲ್ಲಿ ರಿಮೂವಿ ವೆಬ್ ಸೈಟ್ ನ ಪ್ರಿ ಪ್ರೊಡಕ್ಟ್ ಬಿಡುಗಡೆ ಗೊಳಿಸಿ ಇಲ್ಲಿನ ತಂತ್ರಜ್ಞಾನ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಆರತಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಯ್ಯ, ಕ್ರೀಡಾ ಪ್ರೋತ್ಸಾಹಕ ಸಿ.ಆರ್.ಶಂಕರ್ ಕುಮಾರ್, ಜಿ.ರಮೇಶ್, ಕಂಪೆನಿಯ ಎಚ್ಆರ್ ಚಿಕ್ಕರಾಜ್ ಇತರರು ಇದ್ದರು.