ತಿಪಟೂರು. ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆಗಳು ಸಿಗಲಿ ಎಂಬ ಉದ್ದೇಶದಿಂದ ಆರಂಭವಾದ ಕುಪ್ಪಾಳು ಆರೋಗ್ಯ ಕೇಂದ್ರ ನವೀಕರಣದ ಹೆಸರಿನಲ್ಲಿ ಕಳಪೆ ಕಾಮಗಾರಿಯಿಂದ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ.
ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನವೀಕರಣ ಕಾಮಗಾರಿ ನಡೆದಿದ್ದು ಕಳಪೆ ವಸ್ತುಗಳನ್ನು ಬಳಸಿ ಕಾಮಗಾರಿ ನಡೆಸಿದ್ದು ಮತ್ತೆ ಬೀಳುವ ಪರಿಸ್ಥಿತಿಗೆ ಬಂದಿದೆ ಎಂದು ಬಿ ಬಿ ಸಿದ್ದಲಿಂಗಸ್ವಾಮಿ ಆರೋಪಿಸಿದರು.
1994 ರಲ್ಲಿ ಆರಂಭವಾದ ಈ ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ಸ್ಥಿತಿಯಲ್ಲಿತ್ತು ಸುತ್ತಮುತ್ತಲ ಗ್ರಾಮಗಳ ರೋಗಿಗಳಿಗೆ ಉತ್ತಮ ಸೌಲಭ್ಯವನ್ನು ಒದಗಿಸಿ ಕೊಡುತ್ತಿತ್ತು ಇತ್ತೀಚೆಗೆ ಬಿದ್ದ ಭಾರೀ ಮಳೆಗೆ ಆಸ್ಪತ್ರೆ ಬೀಳುವ ಹಂತ ತಲುಪಿತ್ತು ಈ ವೇಳೆ ಆಸ್ಪತ್ರೆ ನವೀಕರಣಕ್ಕಾಗಿ ಯಾವುದೋ ಒಬ್ಬ ಗುತ್ತಿಗೆದಾರರಿಗೆ ನವೀಕರಣಕ್ಕೆ ಕೊಟ್ಟಿದ್ದು ಇದುವರೆಗೂ ಆ ಗುತ್ತಿಗೆದಾರ ಈ ಸ್ಥಳಕ್ಕೆ ಬಂದು ಪರೀಕ್ಷಿಸದೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ನವೀಕರಣ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಗುತ್ತಿಗೆದಾರರಿಗೆ ಕೊಟ್ಟಿರುವ ಕಾಮಗಾರಿ ಆದೇಶದಲ್ಲಿ 22ಲಕ್ಷ ರೂಗಳ ಕಾಮಗಾರಿ ಎಂದು ನಮೂದಾಗಿದು ಆ ಗುತ್ತಿಗೆದಾರ ಬೇರೊಬ್ಬರಿಗೆ ಉಪಗುತ್ತಿಗೆ ನೀಡಿದ್ದಾರೆ ಇಲ್ಲಿ ಕೆಲಸ ಮಾಡುವ ಅವರನ್ನ ಕೇಳಿದರೆ ಮಂಜುನಾಥ್ ಮತ್ತು ಅಣ್ಣೇಗೌಡ ಎಂಬವರು ಕಾಮಗಾರಿ ಮಾಡಿಸುತ್ತಿದ್ದಾರೆ ಎಂದು ತಿಳಿಸುತ್ತಾರೆ ಆದರೆ ಅವರು ಸಹ ಇದುವರೆಗೂ ಸ್ಥಳಕ್ಕೆ ಬಂದು ಪರೀಕ್ಷಿಸಿರುವುದಿಲ್ಲ ಈ ಬಗ್ಗೆ ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಬೇಗ ಕಾಮಗಾರಿಯನ್ನು ಉತ್ತಮವಾಗಿ ಸರಿಪಡಿಸಬೇಕೆಂದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದರು.
ಇದೇ ವೇಳೆ ಮಾತನಾಡಿದ ಕುಪ್ಪಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಸಂತ ಕುಮಾರ್ ರವರು ಉತ್ತಮ ಸ್ಥಿತಿಯಲ್ಲಿದ್ದ ಆಸ್ಪತ್ರೆಯನ್ನು ನವೀಕರಿಸುವ ಉದ್ದೇಶದಿಂದ ಇಂದು ಪಾಳು ಬಿದ್ದ ಆಸ್ಪತ್ರೆಯನ್ನಾಗಿ ಮಾಡಿದ್ದಾರೆ ನವೀಕರಿಸುವ ಗುತ್ತಿಗೆ ಹಣ ಎಷ್ಟು ಮೊತ್ತಕ್ಕೆ ಆಗಿದೆ ಅನ್ನೋದು ಸಹ ಅನುಮಾನಕ್ಕೆ ಗ್ರಾಸವಾಗಿದೆ. ಇದುವರೆಗೂ ನವೀಕರಣ ಗುತ್ತಿಗೆದಾರ ಈ ಸ್ಥಳಕ್ಕೆ ಭೇಟಿಯನ್ನೇ ನೀಡಿಲ್ಲ ನಮ್ಮ ಕ್ಷೇತ್ರದ ಶಿಕ್ಷಣ ಮಂತ್ರಿಗಳು ಇದರ ಬಗ್ಗೆ ಗಮನಹರಿಸಿ ಸದ್ಯದಲ್ಲೇ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿ ಶೀಘ್ರವಾಗಿ ಆಸ್ಪತ್ರೆಯನ್ನು ಪೂರ್ಣಗೊಳಿಸಿ ರೋಗಿಗಳ ಅನುಕೂಲ ಮಾಡಿಕೊಡಬೇಕು ಎಂದರು.
ಈ ವೇಳೆ ಕುಪ್ಪಾಳು ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗಾನಂದ ಸ್ವಾಮಿ, ಬಿ ಮಹೇಶ್, ಸುಂದರೇಶ್, ಕುಮಾರಸ್ವಾಮಿ, ರಮೇಶ್,ಹಾಗೂ ಗ್ರಾಮಸ್ಥರು ಹಾಜರಿದ್ದರು.