ಮಧುಗಿರಿ: ದೇವಸ್ಥಾನದ ನಿವೇಶನವೊಂದರ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ತಾರಕಕ್ಕೇರಿ ಇಬ್ಬರು ಕೊಲೆಯಲ್ಲಿ ಅಂತ್ಯವಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ.
ಮಿಡಿಗೇಶಿ ಗ್ರಾಮದ ಶ್ರೀಧರ್ ಗುಪ್ತ ಎಂಬಾತ ಗಣಪತಿ ದೇವಸ್ಥಾನ ಜಾಗ ಕಬಳಿಸಲು ಯತ್ನಿಸಿದ್ದ ಎನ್ನಲಾಗಿದ್ದು, ಈ ಜಾಗ ಉಳಿಸಿಕೊಳ್ಳಲು ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿದ್ದರು. ಗ್ರಾಮಸ್ಥರ ಪರವಾಗಿ ನ್ಯಾಯಾಲಯದ ತೀರ್ಪು ಬಂದಿತ್ತು.
ಮೃತ ರಾಮಾಂಜನಯ್ಯ ಹಾಗೂ ಶಿಲ್ಪಾ, ದೇವಸ್ಥಾನದ ಜಾಗ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರು. ಇದೇ ವಿಚಾರಕ್ಕೆ ರಾಮಾಂಜನಯ್ಯ ಹಾಗೂ ಶಿಲ್ಪಾ ವಿರುದ್ಧ ದ್ವೇಷಕಾರಿದ್ದ ಜೆಡಿಎಸ್ ಮುಖಂಡ ಶ್ರೀಧರ್ ಗುಪ್ತ, ಮನೆಯಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ಚಾವುವಿನಿಂದ ಮೂವರಿಗೆ ತಿವಿದು ಹಲ್ಲೆ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಿಡಿಗೇಶಿ ಗ್ರಾಮದ ಶಿಲ್ಪ (೩೫) ಮತ್ತು ರಾಮಾಂಜಿನೇಯ (೪೨) ಎಂಬುವವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮಲ್ಲಿಕಾರ್ಜುನ ಅವರಿಗೆ ಗಂಭೀರ ಗಾಯವಾಗಿವೆ. ಮಿಡಿಗೇಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.