ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕರಿಸಿ ಹೊರ ನಡೆದ ವಾಲ್ಮೀಕಿ ಸಮಾಜದ ಮುಖಂಡರು

ತುಮಕೂರು: ಕಳೆದ 226 ದಿನಗಳಿಂದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಶ್ರೀವಾಲ್ಮೀಕಿ ಸಂಸ್ಥಾನ ಮಠದ ಶ್ರೀಪಸನ್ನಾನಂದ ಸ್ವಾಮೀಜಿಗಳು ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಬೇಡಿಕೆ ಈಡೇರಿಸದ ಸರಕಾರ,ಜನರ ಕಣ್ಣೊರೆಸಲು ಮಹರ್ಷಿ ವಾಲ್ಮೀಕಿ ಜಯಂತಿ ಮಾಡಲು ಹೊರಟಿರುವುದನ್ನು ಖಂಡಿಸಿ,ತುಮಕೂರು ಜಿಲ್ಲಾ ವಾಲ್ಮೀಕಿ ಸಮಾಜದ ಮುಖಂಡರು ಇಂದು ಜಿಲ್ಲಾಡಳಿತ ಕರೆದಿದ್ದ ಪೂರ್ವಭಾವಿ ಸಭೆಯನ್ನು ಬಹಿಷ್ಕರಿ ಹೊರ ನಡೆದರು.

ಇಂದು ಜಿಲ್ಲಾಡಳಿತ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆದಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯ ವೇಳೆ ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಜಿ.ಪುರುಷೋತ್ತಮ್ ಹಾಗೂ ರಾಜ್ಯ ಪದಾಧಿಕಾರಿ ಪ್ರತಾಪ್ ಮದಕರಿ ಸೇರಿದಂತೆ ಹಲವರು ಸಭೆ ಆರಂಭವಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ,ಸಭೆಯಲ್ಲಿ ಪಾಲ್ಗೊಳ್ಳದೆ ಹೊರ ನಡೆದರು.

ಈ ವೇಳೆ ಮಾತನಾಡಿದ ಪ್ರತಾಪ ಮದಕರಿ,ರಾಜನಹಳ್ಳಿಯ ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳು ಕಳೆದ 226ರ ದಿನಗಳಿಂದ ಹಗಲು,ರಾತ್ರಿ,ಮಳೆ,ಗಾಳಿ ಎನ್ನದೆ ವಾಲ್ಮೀಕಿ ಸಮುದಾಯಕ್ಕೆ ಶೇ7.5ರಷ್ಟು ಮೀಸಲಾತಿ ಹೆಚ್ಚಿಸಬೇಕೆಂದು ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಕಿವಿಗೊಡದ ಸರಕಾರ,ಇಂದು ವಾಲ್ಮೀಕಿ ಜಯಂತಿ ಆಚರಣೆ ಮಾಡುವ ಮೂಲಕ ಸಮುದಾಯದ ಜನರ ಮೂಗಿಗೆ ತುಪ್ಪ ಸವರಲು ಹೊರಟಿದೆ.ನಿಮಗೆ ನಿಜವಾಗಿಯೂ ವಾಲ್ಮೀಕಿ ಸಮುದಾಯದ ಜನರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಧರಣಿ ನಿರತ ಶ್ರೀಗಳೊಂದಿಗೆ ಮಾತುಕತೆ ನಡೆಸಿ,ಅವರ ಬೇಡಿಕೆಗಳನ್ನು ಈಡೇರಿಸಿ,ನಂತರ ಮಹರ್ಷಿ ವಾಲ್ಮೀಕಿ ಜಯಂತಿ ಮಾಡಿ, ಯಾವ ನೈತಿಕತೆ ಇಟ್ಟುಕೊಂಡು ಜಯಂತಿ ಮಾಡಲು ಸರಕಾರ ಮುಂದಾಗಿದೆ ಎಂದು ಕಿಡಿ ಕಾರಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಶೇ24.10ರಷ್ಟು ಮೀಸಲಾತಿ ದೊರೆಯಬೇಕೆಂಬ ಮಹತ್ವದ ಉದ್ದೇಶದಿಂದ ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ 226 ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸೌಜನ್ಯಕ್ಕೂ ಸರಕಾರದ ಯಾವೊಬ್ಬ ಪ್ರತಿನಿಧಿಯೂ ಭೇಟಿ ನೀಡಿ ಮಾತುಕತೆ ನಡೆಸಿಲ್ಲ.ಹಂತ ಹಂತವಾಗಿ ರಾಜ್ಯ,ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆದರೂ ಸರಕಾರ ತುಟಿಬಿಚ್ಚಿಲ್ಲ. ಈಗಾಗಲೇ ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೆ ಗಮನಹರಿಸುತ್ತಿಲ್ಲ.ಹಾಗಾಗಿ ಸರಕಾರದ ಯಾವುದೇ ಮಂತ್ರಿ, ಶಾಸಕರು ಸಮಾರಂಭಕ್ಕೆ ಆಗಮಿಸಿದರೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಾಪ್ ಎಚ್ಚರಿಸಿದರು.

ಇದೇ ವೇಳೆ ವಾಲ್ಮೀಕಿ ಸಮುದಾಯದ ಮುಖಂಡರಾದ ಡಾ.ಅಂಜನಕುಮಾರ್ ವಾಲ್ಮೀಕಿ,ಶಿವರಾವ್,ದಾಸಪ್ಪ, ನಾಗರಾಜು, ಕುಪ್ಪೂರು ರಂಗಪ್ಪನಾಯಕ,ಗುರುಸ್ವಾಮಿ, ಲಿಂಗುಪಾಳೇಗಾರ್,ಮರುಳೂರು ನಾಗರಾಜ್, ಶೆಟ್ಟಿಹಳ್ಳಿ ರಾಮಚಂದ್ರ, ಸರಸ್ವತಿ, ಸೌಭಾಗ್ಯ, ಭಾಗ್ಯ ಮತ್ತಿತರರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!