ಗುಬ್ಬಿ: ಪಟ್ಟಣದ ಆರೋಗ್ಯ ಕಾಪಾಡುವಲ್ಲಿ ನಿತ್ಯ ಸ್ವಚ್ಚತೆ ಮಾಡುವ ಪೌರ ಕಾರ್ಮಿಕರ ಸೇವೆ ಅವಿಸ್ಮರಣೀಯ. ಇಂತಹವರ ಸೇವೆ ಎಲೆ ಮರೆ ಕಾಯಿಗಳಂತೆ ನಡೆದಿದೆ. ಇವರ ಯೋಗಕ್ಷೇಮ ವಿಚಾರಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ನಡೆಯುವ 14 ಗಣ್ಯರ ಜಯಂತಿ ಕಾರ್ಯಕ್ರಮ ಹೊರತಾದ ಪೌರ ಕಾರ್ಮಿಕರ ದಿನಾಚರಣೆ ವಿಶೇಷ ಗಮನ ಸೆಳೆದಿದೆ ಎಂದರು.
ಕಾರ್ಮಿಕರ ಕೆಲಸ ನಿರಂತರ ನಡೆಯುತ್ತದೆ. ಅವರು ನಿರ್ಲಕ್ಷ್ಯ ತೋರಿದರೆ ಚುನಾಯಿತ ಪ್ರತಿನಿಧಿಗಳಿಗೆ ಬೈಗುಳ ಸಿಗುತ್ತದೆ. ಇವರ ಕೆಲಸವನ್ನು ಕನಿಷ್ಠ ಭಾವನೆಯಲ್ಲಿ ನೋಡುವವರು ಹೆಚ್ಚು. ಆದರೆ ಸ್ವಚ್ಚತೆ ಕಾರ್ಯದ ಮಹತ್ವ ಕೋವಿಡ್ ಸಂದರ್ಭ ಎಲ್ಲರಿಗೂ ತಿಳಿದಿದೆ. ಪೌರ ಕಾರ್ಮಿಕರ ಸೇವೆಗೆ ಬೆಲೆ ಅಂದಿನ ದಿನ ಸಿಕ್ಕಿದೆ ಎಂದ ಅವರು ದುಶ್ಚಟಗಳ ದಾಸರಾಗಿರುವುದು ಕಂಡು ಬರುತ್ತಿದೆ. ಹೊರ ಗುತ್ತಿಗೆಯಲ್ಲಿ ಸಿಗುವ ಕೊಂಚ ಹಣವನ್ನು ಕುಡಿತಕ್ಕೆ ಬಳಸದೆ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಬಳಸಿ ಎಂದು ಕರೆ ನೀಡಿದರು.

ಪಟ್ಟಣದ ಅಭಿವೃದ್ದಿ ವಿಚಾರದಲ್ಲಿ ಪಕ್ಷಾತೀತ ನಿಲುವು ತಾಳಲು ಸೂಚಿಸಿದ್ದೆ. ಜನರ ಕೆಲಸ ಮಾಡುವ ಸಮಯ ಸಲ್ಲದ ರಾಜಕಾರಣ ಬೇಕಿಲ್ಲ. ಈಗಾಗಲೇ ಕೋಟ್ಯಾಂತರ ರೂಗಳ ಅನುದಾನ ಬಂದಿದೆ. ಅದರ ಕ್ರಿಯಾ ಯೋಜನೆ ಸಭೆಯಲ್ಲಿ ಅನುಮೋದನೆ ಆಗಬೇಕಿದೆ. ಆದರೆ ಕಳೆದ ಏಳು ತಿಂಗಳಿಂದ ಸಭೆ ನಡೆಸಿಲ್ಲ. ಅಧಿಕಾರಿಗಳಿಗೆ ಬೆದರಿಸುವುದೇ ಕೆಲಸ ಮಾಡಿಕೊಂಡಿದ್ದಾರೆ. ಪಪಂ ಅಧ್ಯಕ್ಷರು ಅನಾರೋಗ್ಯ ನೆಪದಲ್ಲಿ ಅಭಿವೃದ್ದಿ ಕೆಲಸಕ್ಕೆ ಸ್ಪಂದಿಸಿಲ್ಲ. ಕೂಡಲೇ ಸಭೆ ನಡೆಸಿ. ಬಾರದಿದ್ದರೆ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಾಧಿಕಾರಿ ಮಂಜುಳಾದೇವಿ ಮಾತನಾಡಿ ಪೌರ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ. ಗೃಹಭಾಗ್ಯ ಯೋಜನೆಯಲ್ಲಿ 7.5 ಲಕ್ಷ ರೂಗಳನ್ನು ನೀಡಲಾಗುತ್ತಿದೆ. ಈ ಜೊತೆಗೆ ಹೊಸಹಳ್ಳಿ ಕ್ರಾಸ್ ಬಳಿ ಎರಡು ಎಕರೆ ಪ್ರದೇಶದಲ್ಲಿ ನಿವೇಶನ ಹಂಚಿಕೆ ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆ ಮೂಲಕ ಕಾರ್ಮಿಕರ ಮಕ್ಕಳಿಗೆ ಉಚಿತ ಲಾಪ್ ಟಾಪ್ ನೀಡಲಾಗುತ್ತಿದೆ ಎಂದು ಹೇಳಿದರು.
ಪಪಂ ಸದಸ್ಯ ಸಿ.ಮೋಹನ್ ಮಾತನಾಡಿ ಪೌರ ಕಾರ್ಮಿಕರನ್ನು ನಿಮ್ಮ ಮನೆ ಕೆಲಸಕ್ಕೆ ಬಳಸಿಕೊಳ್ಳುವುದು ನಿಲ್ಲಿಸುವ ಕೆಲಸ ಸಾರ್ವಜನಿಕರು ಮಾಡಬೇಕು. ಸ್ವಚ್ಚತೆ ಜೊತೆ ಇಡೀ ಪಟ್ಟಣದ ಆರೋಗ್ಯ ಕಾಪಾಡುವ ಅವರ ಸೇವೆ ಬಗ್ಗೆ ಗೌರವ ಬೆಳೆಸಿಕೊಳ್ಳುವುದು ಸೂಕ್ತ ಎಂದರು.
ಇದೇ ಸಂದರ್ಭದಲ್ಲಿ ಎಲ್ಲಾ ಕಾರ್ಮಿಕರಿಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಗೆ ಮುನ್ನ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಪೌರ ಕಾರ್ಮಿಕರು ಮೆರವಣಿಗೆ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಲೋಕೇಶ್ ಬಾಬು ವಹಿಸಿದ್ದರು. ಎಲ್ಲಾ ಪಪಂ ಸದಸ್ಯರು ಭಾಗವಹಿಸಿದ್ದರು.