ಗುಬ್ಬಿ: ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಅಗೌರವವಾಗಿ ನಡೆಸಿ ಅಪಮಾನ ಮಾಡಿದ್ದಲ್ಲದೆ ಅನ್ಯಾಯ ಮಾಡಿದ ಜೆಡಿಎಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಲು ಮುಂದಾದ ವಾಸಣ್ಣ ಅಭಿಮಾನಿಗಳು ಬಿದರೆ ಗ್ರಾಮ ಪಂಚಾಯತಿ ಮೂಲಕ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ನೂರಾರು ಮಂದಿ ಸಾಮೂಹಿಕ ರಾಜೀನಾಮೆ ಸಲ್ಲಿಸಿ ಪರ್ವ ಆರಂಭಿಸಿದರು.
ಬಿದರೆ ಗ್ರಾಮದ ಗಣಪತಿ ದೇವಾಲಯ ಆವರಣದಲ್ಲಿ ವೇದಿಕೆ ನಿರ್ಮಿಸಿ ಸ್ಥಳೀಯ ಜೆಡಿಎಸ್ ಮುಖಂಡರು, ಗ್ರಾಪಂ ಚುನಾಯಿತ ಪ್ರತಿನಿಧಿಗಳು, ಮಾಜಿ ಸದಸ್ಯರು ಹಾಗೂ ಪಕ್ಷದ ಜವಾಬ್ದಾರಿ ಹೊತ್ತಿದ್ದ ಹಲವು ಘಟಕಗಳ ಪದಾಧಿಕಾರಿಗಳು ಸ್ವ ಇಚ್ಛೆಯಿಂದ ರಾಜೀನಾಮೆ ಬರೆದು ಸಹಿ ಹಾಕಿ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ರವಾನಿಸಲು ತೀರ್ಮಾನಿಸಿ ಒಟ್ಟಾರೆ ಪತ್ರ ಸಂಗ್ರಹ ಕಾರ್ಯ ನಡೆಸಿದರು.
ಗುಬ್ಬಿ ಶಾಸಕರ ಪರ ನಿಂತ ಹಿನ್ನಲೆ ಉಚ್ಛಾಟಿತಗೊಳಿಸಿದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಜೆಡಿಎಸ್ ಮಾಜಿ ಅಧ್ಯಕ್ಷ ಎಚ್.ಆರ್.ಗುರು ರೇಣುಕಾರಾಧ್ಯ ಸುದ್ದಿಗಾರರೊಂದಿಗೆ ಮಾತನಾಡಿ 1983 ರಿಂದ ಜನತಾ ಪರಿವಾರದಲ್ಲಿ ದುಡಿದ ನಮ್ಮನ್ನು ಹೀನವಾಗಿ ಜೆಡಿಎಸ್ ನಡೆಸಿಕೊಂಡಿದೆ. ಕುಮಾರಣ್ಣ ಅವರ ಆಡಳಿತ ಸಂದರ್ಭ ಸಚಿವರಾಗಿದ್ದ ವಾಸಣ್ಣ ಅವರಿಗೆ ಯಾವುದೇ ಅನುದಾನ ನೀಡದೆ ತೀರಾ ನಿಕೃಷ್ಟವಾಗಿ ನಡೆಸಿಕೊಂಡರು. ಗುಬ್ಬಿ ಕ್ಷೇತ್ರಕ್ಕೆ ಕೋಟ್ಯಾಂತರ ರೂಗಳ ಯೋಜನೆ ತರುವ ಕನಸಿಗೆ ತಣ್ಣೀರು ಎರಚಿದ್ದರು. ಈ ಹಿನ್ನಲೆ ಅಸಮಾಧಾನ ಹುಟ್ಟಿತು. ಇದನ್ನೇ ಮುಂದಿಟ್ಟುಕೊಂಡು ಇಪ್ಪತ್ತು ವರ್ಷದಿಂದ ದುಡಿದು ಪಕ್ಷ ಸಂಘಟನೆ ಮಾಡಿದ ಶಾಸಕರನ್ನು ಹೊರದಬ್ಬುವ ಕೆಲಸ ನಡೆಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದ ಹಿಂದೆ ನಾಗರಾಜು ಎಂಬ ವ್ಯಕ್ತಿಗೆ ಅಭ್ಯರ್ಥಿ ಎಂದು ಹೇಳಿದ ಮೇಲೆ ಶಾಸಕರು ಮತ್ತೊಂದು ಮಾರ್ಗ ಕಂಡು ಕೊಳ್ಳಬೇಕಿದೆ. ಯಾವ ಪಕ್ಷಕ್ಕೆ ಎಂಬ ನಿರ್ಧಾರ ಡಿಸೆಂಬರ್ ಮಾಹೆಯಲ್ಲಿ ಎಲ್ಲಾ ಹಿರಿಯ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನವಿದೆ. ನಿರ್ಧಾರ ಬೆಂಬಲಿಗರಿಗೆ ಬಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರ ಎಲ್ಲಾ ಬೆಂಬಲಿಗರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ಬಿದರೆ ಗ್ರಾಮ ಪಂಚಾಯತಿ ಮೂಲಕ ಸಾಮೂಹಿಕ ರಾಜೀನಾಮೆ ಪರ್ವ ಆರಂಭವಾಗಿದೆ ಎಂದರು.
ಯುವ ಮುಖಂಡ ಕೆ.ಆರ್.ವೆಂಕಟೇಶ್ ಮಾತನಾಡಿ ಗುಬ್ಬಿ ಕ್ಷೇತ್ರದಲ್ಲಿ ವಾಸಣ್ಣ ಅವರ ಗೆಲುವು ಐದನೇ ಬಾರಿಯೂ ಖಚಿತ. ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗೆಲುವು ಸಾಧಿಸಿ ನಿರಂತರ ವಿಜಯ ಗಳಿಸುತ್ತಲೇ ಬಂದಿದ್ದಾರೆ. ಅವರ ಸರಳತೆ, ದಕ್ಷತೆ, ಅಭಿವೃದ್ಧಿ ಕೆಲಸದಿಂದ ಉತ್ತಮ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಧೀಮಂತ ನಾಯಕರಿಂದ ಜೆಡಿಎಸ್ ಪಕ್ಷ ಬೆಳೆದಿದೆ. ಇದೆಲ್ಲಾ ತಿಳಿದು ವರಿಷ್ಠರು ಪಕ್ಷದಿಂದ ಹೊರ ದಬ್ಬುವ ಕೆಲಸಕ್ಕೆ ಮುಂದಾಗಿದ್ದು ಅವರ ಅಭಿಮಾನಿಗಳಲ್ಲಿ ಆಕ್ರೋಶ ತಂದಿದೆ. ಅವರಿಗೆ ಆಗಿರುವ ಅನ್ಯಾಯ ವಿರುದ್ಧ ಸಿಡಿದು ಸಾಮೂಹಿಕ ರಾಜೀನಾಮೆ ಆರಂಭಿಸಿದ್ದೇವೆ. ಬಿದರೆ ಮೂಲಕ ಕ್ಷೇತ್ರದ ಎಲ್ಲಾ 27 ಗ್ರಾಮ ಪಂಚಾಯತಿಯಲ್ಲಿ ಪ್ರತಿ ಶನಿವಾರ ಈ ರಾಜೀನಾಮೆ ಪರ್ವ ನಡೆಯಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆದಿರಾಜ್, ಸುಮತಿರಾಜ್, ಶಿವಾಜಿರಾವ್, ಯತೀಶ್, ಶಿವಲಿಂಗಯ್ಯ, ಮೈಲಾರಯ್ಯ, ರಮೇಶ್, ಮೂರ್ತಪ್ಪ, ಜಗದೀಶ್ ಇತರರು ಇದ್ದರು.