ಕಲಾವಿದರು ಸರ್ಕಾರದ ಗರಿಷ್ಟ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು: ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ

ತುಮಕೂರು: ಕಲಾವಿದರು ಸರ್ಕಾರದ ಗರಿಷ್ಟ ಪ್ರಯೋಜನಗಳನ್ನು ಪಡೆಯಬೇಕು ಎಂದು ಪಾವಗಡ ತಾಲ್ಲೂಕು ನಿಡಗಲ್ಲು ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿಯವರು ತಿಳಿಸಿದರು.

ಪಾವಗಡ ತಾಲ್ಲೂಕು ಬೆಳ್ಳಿಬಟ್ಲು ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಿಡಗಲ್ಲು ಸಂಸ್ಥಾನ ವಾಲ್ಮೀಕಿ ಆಶ್ರಮದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ಗಿರಿಜನ ಉತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಪಾವಗಡ ತಾಲ್ಲೂಕಿನಲ್ಲಿರುವ ಪರಿಶಿಷ್ಟ ಕಲಾವಿದರು ಹಾಗೂ ಅವರಲ್ಲಿರುವ ಕಲೆಯನ್ನು ಬೆಳೆಸುವ ಸಲುವಾಗಿ ಸರ್ಕಾರವು ಗಿರಿಜನ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಲಾವಿದರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಎಚ್.ವಿ. ವೆಂಕಟೇಶ್ ಅವರು ಕಲಾ ಪೋಷಣೆ ಸಮುದಾಯದ ಜವಾಬ್ದಾರಿಯಾಗಿದೆ. ಪಾವಗಡ ತಾಲ್ಲೂಕಿನಲ್ಲಿ ವೈವಿಧ್ಯಮಯ ಕಲಾ ಪ್ರಾಕಾರಗಳಿವೆ. ಪ್ರತಿ ಗ್ರಾಮದಲ್ಲೂ ಬೆಳಕಿಗೆ ಬಾರದ ಕಲಾವಿದರಿದ್ದು, ಇಂತಹ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ತಿಳಿಸಿದರು.

ಹಿರಿಯ ಜಾನಪದ ಸಾಹಿತಿ ಸಣ್ಣನಾಗಪ್ಪ ಮಾತನಾಡಿ ನಿಡಗಲ್ಲು ಸುತ್ತಮುತ್ತಲಿನ ಪ್ರದೇಶವು ಜಾನಪದ ಕಲೆಗಳ ತವರೂರಾಗಿದೆ. ಇಲ್ಲಿನ ಕಲಾವಿದರು ಮತ್ತು ಕಲೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಪ್ರಸಿದ್ದಿ ಪಡೆದಿವೆಯೆಂದೂ ತಿಳಿಸಿದರು.

 ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್ ಮಾತನಾಡಿ ಗಿರಿಜನ ಉಪಯೋಜನೆಯಡಿ ಈ ಕಾರ್ಯಕ್ರಮ ರೂಪಿಸಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲಾ ಕಲಾವಿದರು  ಗಿರಿಜನ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಪರಿಶಿಷ್ಟ ಕಲಾವಿದರು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಿದವು. ಸುಗಮ ಸಂಗೀತ, ರಂಗಗೀತೆಗಳ ಗಾಯನ, ಭಜನೆ ಹಾಡುಗಳು, ಸೋಬಾನೆ ಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಕಾರ್ಯಕ್ರಮದಲ್ಲಿ ಕಲಾವಿದರಾದ ಬೆಜ್ಜಿಹಳ್ಳಿ ರಾಮಣ್ಣ, ಪಾವಗಡ ಗಂಗಣ್ಣ, ಹಿರಿಯ ತತ್ವಪದ ಹಾಗೂ ಭಜನೆ ಕಲಾವಿದರಾದ ದ್ಯಾವರಪ್ಪ, ಚಿತ್ರಕಲಾವಿದ ಬೆಳ್ಳಿಬಟ್ಲು ಬಲರಾಮ್, ಶಿಕ್ಷಕರಾದ ಗಂಗಾಧರ್, ಸಾಹಿತಿ ಹೋ.ಮ.ನಾಗರಾಜು, ಮಿಮಿಕ್ರಿ ಕಲಾವಿದರ ನವೀನ್ ಕಿಲಾರ್ಲಹಳ್ಳಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!