ಪಾವಗಡ: ಟಿವಿ ಮತ್ತು ಮೊಬೈಲ್ ತಂತ್ರಜ್ಞಾನದ ಗೀಳಿನಿಂದ ಗ್ರಾಮೀಣ ಭಾಗದಲ್ಲಿ ನಶಿಸಿ ಹೋಗುತ್ತಿರುವ ಕಲೆ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಶ್ರಮಿಸಬೇಕಿದೆ ಎಂದು ವಾಲ್ಮೀಕಿ ಸಂಜಯ್ ಕುಮಾರ ಸ್ವಾಮೀಜಿ ತಿಳಿಸಿದರು.
ಬೆಳ್ಳಿಬಟ್ಲು ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಿಡಗಲ್ಲು ಮಹರ್ಷಿ ವಾಲ್ಮೀಕಿ ಆಶ್ರಮ ವತಿಯಿಂದ ಏರ್ಪಡಿಸಿದ್ದ ಗಿರಿಜನ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದಕ್ಷಿಣ ಭಾರತದ ಎರಡನೇ ಹಂಪಿ ಎಂದು ಪ್ರಖ್ಯಾತಿ ಪಡೆದಿರುವ ನಿಡಗಲ್ಲು ದುರ್ಗದಲ್ಲಿ ಅಪಾರವಾದ ಕಲೆ ವಾಸ್ತುಶಿಲ್ಪ ಹಾಗೂ ಪ್ರಾಕೃತಿಕ ಸಂಪತ್ತು ಲಭ್ಯವಿದೆ, ಹಾಗೆಯೇ ಈ ಭಾಗದ ಪ್ರತಿಭೆಗಳು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದ್ದು ಸರ್ಕಾರ ಮತ್ತೊಷ್ಟು ಅವಕಾಶ ಕಲ್ಪಿಸಿದರೆ ಗ್ರಾಮೀಣಿಗರ ಸಾಧನೆಗೆ ಸಹಕಾರಿಯಾಗಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್ ಮಾತನಾಡಿ ಸರ್ಕಾರ ಗ್ರಾಮೀಣ ಭಾಗದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರೊಂದಿಗೆ ಪರಿಶಿಷ್ಟ ಪಂಗಡದ ಕಲಾ ತಂಡಗಳಿಗೆ ಉತ್ತೇಜನ ನೀಡಲು ನಿರಂತರವಾಗಿ ಗಿರಿಜನ ಉತ್ಸವ ದಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸಣ್ಣನಾಗಪ್ಪ, ಬ್ಲಾಕ್ ಕಾಂಗ್ರೆಸ್ ಅದ್ಯ ಹೆಚ್.ವಿ.ವೆಂಕಟೇಶ್ ಹಾಗೂ ಗಣ್ಯರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗಾರುಡಿ ಗೊಂಬೆ, ಪಾಳೇಗಾರ ವೇಷ, ಕೀಲು ಕುದುರೆ, ಬೇಡರ ಪಡೆ, ಸೋಮನ ಕುಣಿತ, ಕೋಲಾಟ, ಚಕ್ಕೆ ಭಜನೆ, ಚಿಲಿಪಿಲಿ ಗೊಂಬೆ, ಸುಗಮ ಸಂಗೀತ, ರಂಗ ಗೀತೆಗಳು, ಭಜನೆ ಹಾಡು, ಸೋಭಾನೆ ಪದಗಳು ನೋಡುಗರ ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ಸಮಿತಿ ಹಾಗೂ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ಗ್ರಾ.ಪಂ ಅಧ್ಯಕ್ಷ ಸುರೇಂದ್ರ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಮಾರಣ್ಣ, ಇತಿಹಾಸಕಾರ ಹೋ.ಮ.ನಾಗರಾಜು, ಮುಖಂಡರಾದ ಓಂಕಾರ ನಾಯಕ, ಜಯಣ್ಣ, ನಾರಾಯಣಪ್ಪ, ಬಲರಾಮ್ ಸೇರಿದಂತೆ ಏಕಲವ್ಯ ಗಿರಿಜನ ಜಾನಪದ ಸಾಂಸ್ಕೃತಿಕ ಕಲಾ ಸಂಘ, ಶ್ರೀಶಾರದಾಂಬ ಕಲಾ ಸಂಘ, ವೀರಮದಕರಿ ಗಡಿನಾಡು ಕನ್ನಡ ಕಲಾ ಸಂಘದ ಪದಾಧಿಕಾರಿಗಳು ಕಲಾವಿದರು ಸೇರಿದಂತೆ ಗ್ರಾಮಸ್ಥರು ಇದ್ದರು.