“
ಎಲ್ಲರಿಗೂ ಒಬ್ಬನೇ ಸೂರ್ಯ ಒಬ್ಬನೇ ಚಂದ್ರ ಸಕಲ ಜೀವರಾಶಿಗಳಿಗೂ ಬೆಳಕು ಕೊಡುವ ಸೂರ್ಯ-ಚಂದ್ರರಿಗೆ ಇಲ್ಲದ ಜಾತಿ ನಮಗ್ಯಾಕೆ…|
ಧರ್ಮಸ್ಥಳ ಮಂಜುನಾಥನಿಗೆ ಎಲ್ಲರೂ ಕೊಡುವ ಅಕ್ಕಿಯು ಅನ್ನ ಆಗುವುದಾದರೆ ಶಿವನಿಲ್ಲದ ಜಾತಿ ನಮಗ್ಯಾಕೆ…|
ಒಂದೇ ಭೂಮಿಯಲ್ಲಿ ನಾವೆಲ್ಲರೂ ನಡೆದಾಡುವಾಗ ಮುನಿಸಿಕೊಂಡು ಬಿರುಕು ಬಿಡದ ಭೂಮಿಗೆ ಇಲ್ಲದ ಜಾತಿ ನಮಗ್ಯಾಕೆ…|
ಬ್ರಾಹ್ಮಣನನ್ನು ಅಗ್ನಿಯಲ್ಲಿ ಸುಡುವಾಗ ಶೂದ್ರನನ್ನು ಅಗ್ನಿಯಲ್ಲಿ ಸುಡುವಾಗ ಬೇದಬಾವ ಮಾಡದ ಅಗ್ನಿಗಿಲ್ಲದ ಜಾತಿ ನಮಗ್ಯಾಕೆ…|
ಪ್ರಾಣದ ಉಸಿರ ಉಳಿವಿಗಾಗಿ ರಕ್ತ ಬೇಡುವಾಗ ಕಾಣದ ಜಾತಿ ಈಗ್ಯಾಕೆ…|
ರೈತರು ಬೆಳೆದ ಬೆಳೆಯಲ್ಲಿ ಅನ್ನವನ್ನು ತಿನ್ನುವಾಗ ನೋಡದ ಜಾತಿ ಈಗ್ಯಾಕೆ…|
ಬಾಡು-ಬಳ್ಳೆ ಗುಡ್ಡೆ ಹಾಕಿ ಹಂಚಿ ತಿನ್ನುವಾಗ ಇಲ್ಲದ ಜಾತಿ ಈಗ್ಯಾಕೆ…|
ಎಲ್ಲರೂ ಮುಟ್ಟಿದರು ಮನಬಂದಂತೆ ಮಲಿನ ಮಾಡಿದರು ಮುನಿಸಿಕೊಳ್ಳದ ನೀರಿಗಿಲ್ಲದ ಜಾತಿ ನಮಗ್ಯಾಕೆ…|
ಪರ ಸ್ತ್ರೀ-ಹಸುಗೂಸನ್ನು ನೋಡದೆ ಮೈಮೇಲೆ ಎರಗಿ ಅತ್ಯಾಚಾರವೆಸಗುವಾಗ ಅಂಟದ ಜಾತಿ ಈಗ್ಯಾಕೆ…|
ಮೋಸ ಮಾಡಿ ತಲೆ- ಹಿಡಿದು ತಲೆ-ಹೊಡೆದು ಬದುಕುವಾಗ ಇಲ್ಲದ ಜಾತಿ ಈಗ್ಯಾಕೆ…|
ಮೂಢನಂಬಿಕೆಗಳನ್ನು ಪ್ರತಿಪಾದಿಸಿ ಅಮಾಯಕರಿಂದ ಹಣ-ದವಸ-ದಾನ್ಯ ಸುಲಿಗೆ ಮಾಡುವಾಗ ಇಲ್ಲದ ಜಾತಿ ಈಗ್ಯಾಕೆ…|
ಗುಡಿ-ಗೋಪುರ ಕಟ್ಟಿ ಚಪ್ಪರಹಾಕಿ ಸಿಂಗಾರಗೊಳಿಸುವಾಗ ಇಲ್ಲದ ಮೈಲಿಗೆ ಜಾತಿ ಈಗ್ಯಾಕೆ…|
ಸಕಲ ಜೀವಿಗಳಿಗೂ ಆಶ್ರಯದ ಹೂದಿಕೆಯಾಗಿರುವ ಆಗಸಕ್ಕೆ ಇಲ್ಲದ ಜಾತಿ ನಮಗ್ಯಾಕೆ…|
ಬುದ್ಧ-ಬಸವ-ಅಂಬೇಡ್ಕರ್-ದರ್ಶನಿಕರು ತಿರಸ್ಕರಿಸಿದ ಜಾತಿ ನಮಗ್ಯಾಕೆ…|

ಎನ್. ನಟರಾಜ್ ಮೌರ್ಯ
ಮಧುಗಿರಿ