ಗುಬ್ಬಿ: ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ನಿರಂತರ ಹೋರಾಟ ನಡೆಸಿದ ಶ್ರೀ ಪ್ರಸನ್ನಾನಾಂದ ಸ್ವಾಮೀಜಿ ಅವರ ಆಗ್ರಹಕ್ಕೆ ಕಿಂಚಿತ್ತೂ ಬೆಲೆ ನೀಡದ ಸರ್ಕಾರ ನಡೆಸುವ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಿಂದ ವಾಲ್ಮೀಕಿ ನಾಯಕ ಸಮಾಜ ದೂರ ಸರಿಯಲಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿದ ತಾಲ್ಲೂಕಿನ ನಾಯಕರ ಸಮಾಜ ಬಂಧುಗಳು ಸಾಂಕೇತಿಕ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಗೆ ಮೆರವಣಿಗೆ ಮೂಲಕ ಆಗಮಿಸಿದ ವಾಲ್ಮೀಕಿ ನಾಯಕರ ಸಮಾಜದ ಮುಖಂಡರು ಸರ್ಕಾರದ ಧೋರಣೆ ಖಂಡಿಸಿ ಘೋಷಣೆ ಕೂಗಿದರು. ರಾಜನಹಳ್ಳಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರ ಬೆಂಬಲಿಸಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ.ಆರ್.ಗುರುಸ್ವಾಮಿ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಜನಸಂಖ್ಯಾಧಾರ ಮೇಲೆ ಮೀಸಲಾತಿ ಹೆಚ್ಚಳಕ್ಕೆ ನಡೆಸಿದ ನಿವೃತ್ತಿ ನ್ಯಾಯಾಧೀಶ ನಾಗ ಮೋಹನದಾಸ್ ವರದಿ ಯಥಾವತ್ತಾಗಿ ಜಾರಿಗೊಳಿಸಲು ಬಿಜೆಪಿ ಸರ್ಕಾರ ಮೀನಾಮೇಷ ಎಣಿಸಿದೆ. ಈ ಬಗ್ಗೆ ನಿರಂತರ ಹೋರಾಟ ನಡೆಸಿದ ಸ್ವಾಮೀಜಿ ಅವರ ಅನಿರ್ಧಿಷ್ಟಾವಧಿ ಹೋರಾಟ ಈಗಾಗಲೇ 231 ದಿನ ತಲುಪಿದೆ. ಆದರೂ ಇತ್ತ ಕಡೆ ನಿರ್ಲಕ್ಷ್ಯ ತೋರಿದ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಮಹರ್ಷಿ ವಾಲ್ಮೀಕಿ ಜಯಂತಿ ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಸರ್ಕಾರ ಎಚ್ಚೆತ್ತು ಈಗಲಾದರೂ ಮೀಸಲಾತಿ ಹೆಚ್ಚಳ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ತಾಪಂ ಮಾಜಿ ಸದಸ್ಯ ಪುಟ್ಟರಾಜು ಮಾತನಾಡಿ ಕೆಳ ಸಮುದಾಯ ವಾಲ್ಮೀಕಿ ಸಮಾಜಕ್ಕೆ ನೀಡಬೇಕಾದ ಮೀಸಲಾತಿಗೆ ಸರ್ಕಾರ ವಿಳಂಬ ನೀತಿ ಅನುಸರಿಸಿದೆ. ನಮ್ಮನ್ನು ಮುಖ್ಯವಾಹಿನಿಗೆ ತರಲು ಆಲೋಚನೆ ಮಾಡುವ ಸರ್ಕಾರ ನಾಯಕ ಸಮಾಜಕ್ಕೆ ಮಾತು ಕೊಟ್ಟು ಮಾತು ತಪ್ಪಿದ ಸರ್ಕಾರ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಈ ಹೋರಾಟಕ್ಕೆ ಬೆಲೆ ನೀಡದ ಸರ್ಕಾರದ ಕಾರ್ಯಕ್ರಮವನ್ನು ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಿ ನಮ್ಮ ಹಕ್ಕು ಕೇಳುತ್ತೇವೆ. ಈ ಕೂಡಲೇ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಮಹಿಳಾ ಮುಖಂಡರಾದ ಸೌಭಾಗ್ಯಮ್ಮ ಮಾತನಾಡಿ ರಾಜನಹಳ್ಳಿ ಶ್ರೀ ಗಳ ಹೋರಾಟಕ್ಕೆ ವಾಲ್ಮೀಕಿ ಸಮಾಜದ ಮಹಿಳೆಯರು ಬೆಂಬಲ ಸೂಚಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಗೆ ಹಾಜರಾಗಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತೇವೆ. ಈ ನಿಟ್ಟಿನಲ್ಲಿ ಸರ್ಕಾರ ನಡೆಸುವ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದರು.
ನಂತರ ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎ.ನರಸಿಂಹಮೂರ್ತಿ, ಹೇರೂರು ನಾಗಣ್ಣ, ರಾಮಚಂದ್ರಯ್ಯ, ಕೃಷ್ಣಮೂರ್ತಿ, ಅಡವೀಶಯ್ಯ, ರಂಗನಾಥ್, ರಾಘು, ರವೀಶ್, ಹಾಗಲವಾಡಿ ಚಂದ್ರು ಇತರರು ಇದ್ದರು.