ಪಾವಗಡ: ಅಕ್ಟೋಬರ್ 9 ರಂದು ಈದ್ ಮಿಲಾದ್ ಅಂಗವಾಗಿ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸಲಾಗುವುದು ಎಂದು ಮುತವಲ್ಲಿ ಮೊಹಮದ್ ಫಜಲುಲ್ಲಾ ತಿಳಿಸಿದರು.
ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಜಾಮಿಯಾ ಮಸೀದಿ, ನೌ ಜವಾನ್ ಕಮಿಟಿ ವತಿಯಿಂದ ಈದ್ ಮಿಲಾದ್ ದಿನದಂದು ಸಾಮೂಹಿಕ ವಿವಾಹ ನಡೆಸಲಾಗುವುದು. ವಿವಾಹವಾಗುವ ಜೋಡಿಗಳಿಗೆ ಅಗತ್ಯವಿರುವ ವಸ್ತ್ರ, ಪಾತ್ರೆ, ದಿನಸಿ, ಹಾಸಿಗೆ, ಮಂಚ ಇತ್ಯಾದಿ ಸಾಮಗ್ರಿಗಳನ್ನು ನೀಡಲಾಗುವುದು ಎಂದರು.
ಪುರಸಭೆ ಸದಸ್ಯ ಎಂ ಎ ಜಿ ಇಮ್ರಾನ್ ಮಾತನಾಡಿ, ಈದ್ ಮಿಲಾದ್ ಪ್ರಯುಕ್ತ ಬುಧವಾರದಿಂದ ಮೊಹಮದ್ ಪೈಗಂಬರ್ ಅವರ ಜೀವನ ಚರಿತ್ರೆ ಪಠಣ ಆರಂಭವಾಗಿದೆ. ಅಕ್ಟೋಬರ್-9 ಕ್ಕೆ ಪಠಣ ಮುಕ್ತಾಯವಾಗಲಿದೆ. ಈದ್ ಮಿಲಾದ್ ದಿನದಂದು ಜಾಮೀಯ ಮಸೀದಿಯಿಂದ ರೊಪ್ಪ, ಶಿರಾ ರಸ್ತೆಯ ಆಜಂ ಮಸೀದಿ, ಕನುಮಲ ಚೆರುವು ಮಸೀದಿ ವರೆಗೆ ಮೆಕ್ಕಾ, ಮದೀನ, ಅಜ್ಮೀರ್ ದರ್ಗಾ, ವಿವಿಧ ಸ್ಮಾರಕಗಳ ಮಾದರಿಯೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದರು.
ಜಾಮಿಯಾ ಮಸೀದಿ ಕಾರ್ಯದರ್ಶಿ ಜಹೂರ್ ಸಾಬ್, ರಫೀಕ್ ಸಾಬ್, ಇಕ್ಬಾಲ್ ಸಾಬ್, ಅಲ್ತಾಪ್ ಸಾಬ್, ಆದಿಲ್, ನೌ ಜವಾನ್ ಕಮಿಟಿ ಅಧ್ಯಕ್ಷ ರಿಯಾಜ್, ಸಿಕಂದರ್, ಷಫಿ, ಬಲ್ಲು, ಸಾದಿಕ್, ಇಮ್ರಾನ್, ಗೌಸ್ ಪೀರ್, ಹಜರತ್ ಮುಬಾರಕ್ ಉಪಸ್ಥಿತರಿದ್ದರು.