ರೈತರಿಗೆ ಅಲ್ಪಾವಧಿ ರಾಗಿ ಬಿತ್ತನೆ ಬೀಜ ಒದಗಿಸಿ : ಸಚಿವ ಆರಗ ಜ್ಞಾನೇಂದ್ರ

ತುಮಕೂರು : ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರಾಗಿ ಬಿತ್ತನೆಯಾಗಿರುವುದಿಲ್ಲ. ಅಲ್ಪಸ್ವಲ್ಪ ಬಿತ್ತನೆಯಾಗಿರುವ ರಾಗಿ ಬೆಳೆ ಮಳೆಯಿಂದ ಹಾನಿಯಾಗಿದ್ದು, ಹೊಸದಾಗಿ ಅಲ್ಪಾವಧಿಯ ರಾಗಿ ಹಾಗೂ ಪರ್ಯಾಯ ಬೆಳೆಗಳ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ರೈತರಿಗೆ ವಿತರಿಸಬೇಕು ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು 2022-23ನೇ ಸಾಲಿನ ಜೂನ್ ೨೦೨೨ರ ಅಂತ್ಯಕ್ಕೆ ಸಾಧಿಸಲಾದ 1ನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿ ಬೆಳೆ ಅತಿವೃಷ್ಠಿಯಿಂದಾಗಿ ಕೈಗೆ ಬರದಂತಾಗಿದ್ದು, ಪುನಃ ಅಲ್ಪಾವಧಿಯ ರಾಗಿ ಬಿತ್ತನೆ ಬೀಜ, ರಸಗೊಬ್ಬರ ನೀಡಿ, ರಾಗಿ ಬೆಳೆಯಲು ಪ್ರೋತ್ಸಾಹ ನೀಡಬೇಕೆಂದು ಅವರು ತಿಳಿಸಿದರಲ್ಲದೇ, ಸಿರಿಧಾನ್ಯಗಳಾದ ಸಜ್ಜೆ, ನವಣೆ, ಕೊರಲೆ ಬೆಳೆಗಳನ್ನು ಬೆಳೆಯಲು ರೈತರಿಗೆ ಉತ್ಸಾಹ ತುಂಬಬೇಕೆಂದು ತಿಳಿಸಿದರು. ಕೇಂದ್ರ ಪುರಸ್ಕೃತ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಆರ್ಥಿಕ ಸಹಾಯ ನೀಡುತ್ತಿದ್ದು, ಆದಕಾರಣ ರೈತರು ಕೂಡಲೇ ಇ-ಕೆವೈಸಿ ಮಾಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದರು. ಪಿಎಂ ಕಿಸಾನ್ ಯೋಜನೆಯಡಿ ಶೇ.100 eಞಥಿಛಿ ಮುಗಿಯಬೇಕು. ಅರ್ಹರಿಗೆ ಪಿಎಂ ಕಿಸಾನ್ ಹಣ ತಲುಪಬೇಕು, ಅನರ್ಹರನ್ನು ಕೈ ಬೀಡಬೇಕು. 2022-23ಮತ್ತು 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ನೋಂದಾಯಿಸಿರುವ ರೈತರಿಗೆ ಬೆಳೆವಿಮೆ ಪರಿಹಾರ ಒದಗಿಸಲು ಲೀಡ್ ಬ್ಯಾಂಕ್ ಜೊತೆಗೂಡಿ ಬ್ಯಾಂಕುಗಳ ಸಭೆ ಕರೆದು ಚರ್ಚಿಸುವಂತಹ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೋಟಗಾರಿಕೆ ಉಪನಿರ್ದೇಶಕ ರಘು ಅವರಿಗೆ ಸೂಚಿಸಿದರು. 2022-23 ಮತ್ತು 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಮಾವು, ದಾಳಿಂಬೆ, ಪಪ್ಪಾಯ, ಅಡಿಕೆ ಬೆಳೆಗಳಿಗೆ ಬೆಳೆವಿಮೆಗೆ ನೋಂದಾಯಿಸಿರೋ ರೈತರಿಗೆ ಬೆಳೆವಿಮೆ ಪರಿಹಾರವನ್ನು ಒದಗಿಸಬೇಕು. ಬ್ಯಾಂಕ್ ಅಧಿಕಾರಿಗಳು ರೈತರನ್ನು ಅಲೆದಾಡಿಸದೇ ಬೆಳೆವಿಮೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಗಂಟು ರೋಗ ಹರಡದಂತೆ ಲಸಿಕಾಕರಣ ಕೈಗೊಳ್ಳಬೇಕು. ಇದೊಂದು ಭಯಂಕರ ಪಶುರೋಗವಾಗಿದ್ದು, ಪಶುಪಾಲನಾ ಇಲಾಖೆ ಮತ್ತು ತುಮಕೂರು ಹಾಲಿನ ಡೈರಿ ಪಶುವೈದ್ಯಾಧಿಕಾರಿಗಳ ಸಹಕಾರದೊಂದಿಗೆ ಆಂದೋಲನದ ರೀತಿಯಲ್ಲಿ ರೋಗದ ಕುರಿತು ಜಾಗೃತಿ ಮತ್ತು ಮುನ್ನೆಚ್ಚರಿಕೆ ಮತ್ತು ಲಸಿಕಾಕರಣ ನಡೆಯಬೇಕು ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಜಯಣ್ಣ ಅವರಿಗೆ ನಿರ್ದೇಶನ ನೀಡಿದರು.

ಶಿರಾ ಶಾಸಕ ರಾಜೇಶ್ ಗೌಡ ಮಾತನಾಡಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳೇ ಇಲ್ಲ, ಹೊರಗಿಂದ ತರಿಸಿ ಕೊಡುವಂತಹ ಪರಿಸ್ಥಿತಿಯಿದೆ ಎಂದು ದೂರಿದರು. ಡಯಾಲಿಸೀಸ್ ವ್ಯವಸ್ಥೆ ಒದಗಿಸಿ ರೋಗಿಗಳಿಗೆ ಅನುಕೂಲ ಮಾಡಬೇಕು ಎಂದು ರಾಜೇಶ್ ಗೌಡ ಹೇಳಿದರು. ಜನನಿ ಸುರಕ್ಷಾ ಯೋಜನೆಯಡಿ ಅರ್ಹರಿಗೆ ಸೌಲಭ್ಯ ತಲುಪಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ರೀತಿ ದೂರು ಬರದಂತೆ ಡಿಹೆಚ್‌ಓ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ 76 ಅತ್ಯಾವಶ್ಯಕ ಔಷಧಿಗಳು ಲಭ್ಯವಿರುವಂತೆ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಮೆಟ್ರಿಕ್ ಪೂರ್ವ/ನಂತರದ ವಿದ್ಯಾರ್ಥಿನಿಲಯಗಳಿಗೆ ಮಂಜೂರಾದ ಕಟ್ಟಡಗಳ ಪೈಕಿ ಪ್ರಾರಂಭಿಸದಿರುವ ಕಟ್ಟಡ ಕಾಮಗಾರಿಗಳನ್ನು ಶೀಘ್ರ ಪ್ರಾರಂಭ ಮಾಡಿ ವಿದ್ಯಾರ್ಥಿ ನಿಲಯ ಕಾರ್ಯಾರಂಭ ಮಾಡಬೇಕು ಎಂದು ಸೂಚಿಸಿದರು. ಜಿಲ್ಲೆಗೆ ಮಂಜೂರಾಗಿರುವ ಅಂಬೇಡ್ಕರ್ ಭವನಗಳ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧವಾಗಬೇಕು ಎಂದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 2018-19 ಮತ್ತು 2019-20 ನಿಗದಿಪಡಿಸಿರುವಂತೆ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ವಿವಿಧ ಹಂತಗಳಲ್ಲಿ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಬೇಕು ಎಂದು ತಿಳಿಸಿದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ ಬರುವ ಎಲ್ಲ ನಿಗಮಗಳು ನಾಗರೀಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು ಎಂದು ತಿಳಿಸಿದರು.

ಬೆಸ್ಕಾಂ 20 ಮನೆಗಳಿರುವ ಕಡೆ ಬೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಶಿರಾ ಶಾಸಕರು ತಿಳಿಸಿದಾಗ, ಪ್ರತಿಕ್ರಿಯಿಸಿದ ಸಚಿವರು ಶೀಘ್ರ ವಿದ್ಯುತ್ ವ್ಯವಸ್ಥೆ ಆಗಬೇಕೆಂದರಲ್ಲದೇ ಲೈನ್ ಮ್ಯಾನ್‌ಗಳು 24/7 ಸೇವೆಗೆ ಲಭ್ಯರಿದ್ದು ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ವಿಶೇಷ ಪಾಲನಾ ಯೋಜನೆ, ಪ್ರಾಯೋಜಿತ ಕಾರ್ಯಕ್ರಮಗಳು ಹಾಗೂ ಉಪಕಾರ ಯೋಜನೆಯಡಿ ವಿವಿಧ ವರ್ಗಗಳ ನಿರಾಶ್ರಿತ ಮಕ್ಕಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೂಲಕ ಕಾರ್ಯಕ್ರಮಗಳ ಸದುಪಯೋಗವಾಗಬೇಕು ಎಂದು ಸಚಿವರು ತಿಳಿಸಿದರು.

ನರೇಗಾ ಹಣ ಸದ್ಭಳಕೆ ಮಾಡಬೇಕು ಎಂದ ಸಚಿವರು, ಗ್ರಾಮ ಪಂಚಾಯತಿಗಳಲ್ಲಿ ಯಾವುದೇ ಅವ್ಯವಹಾರದ ದೂರು ಬಾರದಂತೆ ಜಿಲ್ಲಾ ಪಂಚಾಯತ್ ಸಿಇಓ ಪ್ರತಿ ತಿಂಗಳು ಒಂದೆರೆಡು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಲೆಕ್ಕ ಪತ್ರಗಳನ್ನು ಪರೀಶೀಲಿಸಬೇಕು ಎಂದರು.

ಜಲಜೀವನ ಮಿಷನ್ ಅಡಿ ಪ್ರತಿ ನಾಗರೀಕನಿಗೂ ಶುದ್ಧ ಕುಡಿಯಲು ನೀರು ಒದಗಿಸುವುದು ಪಿಎಂ ಕನಸಿನ ಯೋಜನೆಯಾಗಿದ್ದು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದರು.

ಸಾಮಾಜಿಕ ಅರಣ್ಯ ಇಲಾಖೆಯಡಿ ರಸ್ತೆಗಳ ಎರಡು ಬದಿಯಲ್ಲಿ ಇರುವ ಒಣಗಿರುವ ಮರಗಳನ್ನು ತೆರವುಗೊಳಿಸಬೇಕು. ಒಣಗಿದ ಮರಗಳು ಬಹಳ ಅಪಾಯಕಾರಿ, ಇದರಿಂದಾಗಿ ಪ್ರಾಣಹಾನಿಯಾಗುವ ಸಂಭವ ಇರುತ್ತದೆ ಎಂದ ಸಚಿವರು ವಿದ್ಯುತ್ ಕಂಬಗಳ ಮೇಲೆ ಹಾದು ಹೋಗಿರುವ ಅಕೇಶಿಯಾ ಮರಗಗಳನ್ನು ತೆರವುಗೊಳಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತಿಳಿಸಿದರು.

ಪಿಡಬ್ಲ್ಯೂಡಿ ಮತ್ತು ಆರ್‌ಡಿಪಿಆರ್ ಇಲಾಖೆಯ ಅಧಿಕಾರಿಗಳು ಮಳೆಹಾನಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳಬೇಕು. ಯೋಜನೆಯ ಪ್ರಗತಿಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿರಬೇಕು. ಮಂಜೂರಾದ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು. ಕೆರೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ ಪರಿಣಾಮ ಭಾರಿ ಹಾನಿ ತಪ್ಪಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ಷೇತ್ರಗಳಿಗ ತೆರಳಬೇಕು ಎಂದು ಸಚಿವರು ಈ ಸಂದರ್ಭ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಸಂಸದರಾದ ಜಿ.ಎಸ್.ಬಸವರಾಜು, ಶಾಸಕರುಗಳಾದ ಜಿ.ಬಿ.ಜ್ಯೋತಿಗಣೇಶ್, ತಿಪ್ಪೇಸ್ವಾಮಿ, ಎ.ಎಸ್.ಜಯರಾಮ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಪೂರ್ ವಾಡ್, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!