ಶುಚಿತ್ವ ಕಾಪಾಡಲು ಸಮುದಾಯ ಸಹಕಾರ ಅತ್ಯಗತ್ಯ : ತಾಪಂ ಇಓ ಶಿವಪ್ರಕಾಶ್

ಗುಬ್ಬಿ: ಸಮಾಜದ ಆರೋಗ್ಯ ಕಾಪಾಡಿಕೊಳ್ಳಲು ಮೊದಲು ಸ್ವಚ್ಚ ಪರಿಸರ ಸೃಷ್ಟಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆ ಜೊತೆ ಸಮುದಾಯ ಸಹಕಾರ ಅತ್ಯಗತ್ಯ ಎಂದು ತಾಪಂ ಇಓ ಶಿವಪ್ರಕಾಶ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಚತಾ ಹೀ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ನಂತರ ಆವರಣ ಸ್ವಚ್ಚಗೊಳಿಸಿ ಮಾತನಾಡಿದ ಅವರು ಎಲ್ಲೆಂದರಲ್ಲಿ ಕಸ ಹಾಕುವ ಪ್ರವೃತ್ತಿ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸ್ಥಳೀಯ ಗ್ರಾಮ ಪಂಚಾಯತಿ ಸಿಬ್ಬಂದಿ ಮಾಡಲಿದ್ದಾರೆ ಎಂದು ತಿಳಿಸಿದರು.

ಸ್ವಚ್ಚತೆಗೆ ಆದ್ಯತೆ ನೀಡಿ ಈಗಾಗಲೇ ಎಲ್ಲಾ ಪಂಚಾಯಿತಿಯಲ್ಲಿ ಕಸ ವಿಲೇವಾರಿ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಕಸ ವಿಲೇವಾರಿ ಘಟಕ ನಿರ್ಮಿಸಿ ನಿರ್ವಹಣೆಗೆ ಮಹಿಳಾ ಸಂಘಗಳನ್ನು ನೇಮಕ ಮಾಡಲಾಗಿದೆ. ಕಸ ವಿಲೇವಾರಿಗೆ ಅಗತ್ಯ ವಾಹನಗಳನ್ನು ಖರೀದಿಸಿ ಮಹಿಳಾ ಚಾಲಕರಿಗೆ ತರಬೇತಿ ನೀಡಲಾಗಿದೆ. ಎಲ್ಲಾ ಗ್ರಾಮಗಳಲ್ಲಿ ಕಸ ವಿಲೇವಾರಿ ಕೆಲಸ ನಡೆಸಲಾಗಿದೆ ಎಂದು ವಿವರಿಸಿದರು.

ನರೇಗಾ ಯೋಜನೆ ಸಹಾಯಕ ನಿರ್ದೇಶಕ ಇಂದ್ರೇಶ್ ಮಾತನಾಡಿ ಸಮಾಜದ ಸ್ವಾಸ್ಥ್ಯ ಉತ್ತಮ ಪರಿಸರದಿಂದ ಕಾಪಾಡಬಹುದಾಗಿದೆ. ಗ್ರಾಮೀಣ ಮುಗ್ದ ಜನರಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯ ಬಗ್ಗೆ ಅರಿವು ಮೂಡಿಸಬೇಕಿದೆ. ಈ ಕೆಲಸ ಮಾಡಲು ನಮ್ಮ ಅಧಿಕಾರಿಗಳ ವೃಂದ ಮುಂದಾಗಿದೆ. ಪ್ರತಿ ಪಂಚಾಯಿತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಜೊತೆಗೆ ಕಸ ವಿಲೇವಾರಿ ಬಗ್ಗೆ ತಿಳಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣ ಸ್ವಚ್ಚಗೊಳಿಸುವ ಕಾರ್ಯ ನಡೆಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಜಗನ್ನಾಥಗೌಡ, ವ್ಯವಸ್ಥಾಪಕಿ ಜಯಮ್ಮ, ಸಿಬ್ಬಂದಿಗಳಾದ ಮಂಜುನಾಥ್, ರಾಘವೇಂದ್ರ, ರಮೇಶ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!