ರಾಜೀನಾಮೆ ಕೇಳುವ ನೈತಿಕತೆ ನಾಗರಾಜು ಅವರಿಗಿಲ್ಲ : ಕಡಬ ಗ್ರಾಪಂ ಅಧ್ಯಕ್ಷ ಸಿ.ಕೆ.ಗೌಡ

ಗುಬ್ಬಿ: ಪಕ್ಷೇತರ ಅಭ್ಯರ್ಥಿಯಾಗಿ ಶಾಸಕರಾಗಿ ನಂತರ ಜೆಡಿಎಸ್ ಪಕ್ಷಕ್ಕೆ ಬಂದ ಶಾಸಕ ವಾಸಣ್ಣ ಅವರು ವೈಯಕ್ತಿಕ ವರ್ಚಸ್ಸಿನಲ್ಲಿ ಗೆಲುವು ಸಾಧಿಸಿದ್ದಾರೆ. ಪಕ್ಷಕ್ಕೆ ಅವರ ಅವಶ್ಯಕತೆ ಇತ್ತೇ ಹೊರತು ಜೆಡಿಎಸ್ ಅವರನ್ನು ಬೆಳೆಸಿಲ್ಲ. ಅವರ ರಾಜೀನಾಮೆ ಕೇಳುವ ನೈತಿಕತೆ ನಾಗರಾಜು ಅವರಿಗಿಲ್ಲಯೇ ಇಲ್ಲ ಎಂದು ಕಡಬ ಗ್ರಾಪಂ ಅಧ್ಯಕ್ಷ ಸಿ.ಕೆ.ಗೌಡ ತಮ್ಮ ಅಭಿಮತ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಡಬ ಗ್ರಾಮದ ಶ್ರೀ ಗಣೇಶ ದೇವಾಲಯದ ನಡೆದ ಜೆಡಿಎಸ್ ಗೆ ಸಾಮೂಹಿಕ ರಾಜೀನಾಮೆ ಸಪ್ತಾಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಳೆದ ಇಪ್ಪತ್ತು ವರ್ಷ ಜೆಡಿಎಸ್ ಕಟ್ಟಿದ್ದು ವಾಸಣ್ಣ ಎಂಬ ವಿಷಯ ಮರೆಯದೆ ಮಾತನಾಡಬೇಕು. ಗುಬ್ಬಿ ಕ್ಷೇತ್ರವಲ್ಲದೇ ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಸದೃಢ ಗೊಳಿಸಿದ್ದರು. ಸಚಿವ ಸ್ಥಾನ ನೀಡಿದ ಬಳಿಕ ಅಭಿವೃದ್ದಿ ಕೆಲಸ ಮಾತ್ರ ನೀಡದೆ ಅವರನ್ನು ಹೀನವಾಗಿ ನಡೆಸಿಕೊಂಡ ಬಗ್ಗೆ ಎಲ್ಲಾ ಕಾರ್ಯಕರ್ತರಿಗೆ ತಿಳಿದಿದೆ. ಈ ಹಿನ್ನಲೆಯಲ್ಲಿ ಇಡೀ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂದರು.

ಮಾಜಿ ಗ್ರಾಪಂ ಸದಸ್ಯ ದರ್ಶನ್ ಮಾತನಾಡಿ ಜೆಡಿಎಸ್ ವರಿಷ್ಠರು ಯಾವ ಚುನಾವಣೆಯಲ್ಲೂ ಪ್ರಚಾರ ಕಾರ್ಯ ಮಾಡಿಲ್ಲ. ಈಗ ಹೊಸ ಅಭ್ಯರ್ಥಿ ನಾಗರಾಜು ಎಂದು ಹೇಳಿ ವರ್ಷದಲ್ಲಿ ನಾಲ್ಕು ಬಾರಿ ಗುಬ್ಬಿ ಕಡೆ ಬಂದಿದ್ದಾರೆ. ಇಲ್ಲೇ ತಿಳಿಯುತ್ತೆ ವಾಸಣ್ಣ ಅವರ ರಾಜಕಾರಣ. ಪಕ್ಷ ಸಂಘಟನೆ ಬಲಗೊಂಡ ಬಳಿಕ ಯಾರಾದರೂ ಅಭ್ಯರ್ಥಿ ಆಗಬಹುದು. ಆದರೆ ವಾಸಣ್ಣ ಪಕ್ಷ ತೊರೆದ ಮೇಲೆ ಸಾವಿರಾರು ಕಾರ್ಯಕರ್ತರು ಸಾಲು ಸಾಲು ರಾಜೀನಾಮೆ ನೀಡುತ್ತಿರುವುದು ಅವರ ಮೇಲಿನ ಜನರ ಪ್ರೀತಿ ತೋರುತ್ತದೆ ಎಂದರು.

ಯಾದವ ಮುಖಂಡ ಸಿದ್ದರಾಜು ಮಾತನಾಡಿ ಜೆಡಿಎಸ್ ಬೆಳೆಸಿದ್ದು ನಮ್ಮ ಶಾಸಕರು. ಗುಬ್ಬಿಯಲ್ಲಿ ತನ್ನದೇ ವರ್ಚಸ್ಸು ಗಳಿಸಿರುವ ಶ್ರೀನಿವಾಸ್ ಅವರು ಪಕ್ಷೇತರ ನಿಂತರೂ ಗೆಲುವು ಸಾಧಿಸುತ್ತಾರೆ. ಅವರನ್ನು ಪಕ್ಷದಿಂದ ಹೊರ ಹಾಕಿದ ಜೆಡಿಎಸ್ ಮುಂದಿನ ದಿನದಲ್ಲಿ ಅವರ ಅವಶ್ಯಕತೆ ಅರಿಯಲಿದೆ. ಗ್ರಾಮೀಣ ಜನರ ಹತ್ತಿರವಾದ ವಾಸಣ್ಣ ಅವರನ್ನು ಐದನೇ ಬಾರಿ ಕೂಡಾ ಶಾಸಕರಾಗಿ ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಹಲವು ಸಮುದಾಯದ ಮುಖಂಡರು ಸಾಮೂಹಿಕ ರಾಜೀನಾಮೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ.ಎನ್.ಬಾಲಕೃಷ್ಣ, ಮುಖಂಡರಾದ ವೆಂಕಟರಂಗಯ್ಯ, ಕುಮಾರ್, ಆಡಗೊಂಡನಹಳ್ಳಿ ಉಮೇಶ್, ಕಾಡಶೆಟ್ಟಿಹಳ್ಳಿ ವಿಜಯ್ ಕುಮಾರ್, ಲೋಕೇಶ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!