ಇಂದು ಸಾಮರಸ್ಯಕ್ಕಾಗಿ ಜೆಡಿಎಸ್ ಸತ್ಯಾಗ್ರಹ

ತುಮಕೂರು: ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ರಾಜ್ಯದಾದ್ಯಂತ ಸಾಮರಸ್ಯಕ್ಕಾಗಿ ಸತ್ಯಾಗ್ರಹಕ್ಕೆ ಜೆಡಿಎಸ್ ಪಕ್ಷ ಕರೆ ನೀಡಿದ್ದು, ಜಿಲ್ಲಾ ಘಟಕದ ವತಿಯಿಂದ ನಗರ ಟೌನ್ ಹಾಲ್ ನಲ್ಲಿ ಸಾಮರಸ್ಯ ಮತ್ತು ಸಮಾನತೆಗಾಗಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ನಡೆದ ಪೂರ್ವಭಾವಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ನಡೆಯಲಿರುವ ಈ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಟೌನ್ ಹಾನ್ ಬಳಿ ನಡೆಯಲಿರುವ ಸತ್ಯಾಗ್ರಹದಲ್ಲಿ ಭಾಗವಹಿಸುವವರು ಪಕ್ಷದ ಕಚೇರಿಯಿಂದ ಹೊರಡಬೇಕು, ಜಿಲ್ಲಾ ಪದಾಧಿಕಾರಿಗಳು, ನಗರ ಮತ್ತು ಗ್ರಾಮಾಂತರ ಕ್ಷೇತ್ರದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಶಾಸಕರು ಹಾಗೂ ಅಭ್ಯರ್ಥಿ ಆಕಾಂಕ್ಷಿಗಳು ಭಾಗವಹಿಸಬೇಕು ಎಂದು ಸೂಚನೆ ನೀಡಿದರು.

ದೇಶದಲ್ಲಿ ಕೋಮು ಸಾಮರಸ್ಯ ಅತಿ ಹೆಚ್ಚು ಕದಡಿಯುವುದು ರಾಜ್ಯದಲ್ಲಿ ಮಾತ್ರ, ಇಂತಹ ವ್ಯವಸ್ಥೆಯ ವಿರುದ್ಧ ಜಾತ್ಯಾತೀತ ಜನತಾದಳ ಸಾಮರಸ್ಯ ಮತ್ತು ಸಮಾನತೆಗಾಗಿ ಆಗ್ರಹಿಸಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಪಕ್ಷದ ಚಟುಚಟಿಕೆಯಲ್ಲಿ ತೊಡಗಿಸಿಕೊಂಡರೆ ಪಕ್ಷ ಗುರುತಿಸಿ ಅಧಿಕಾರ ನೀಡುತ್ತದೆ ಎಂದರು.

ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಒಂಭತ್ತರಿಂದ ಹತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷವನ್ನು ಸಂಘಟಿಸಬೇಕು, ಜಿಲ್ಲೆಯಲ್ಲಿ ಬಲಿಷ್ಠವಾಗಿರುವ ಪಕ್ಷಕ್ಕೆ ಇನ್ನಷ್ಟು ಬಲ ತುಂಬುವಂತಾಗಬೇಕು ಎಂದು ಹೇಳಿದರು.

ಕಾರ್ಯಕರ್ತರಿಗೆ ಅಧಿಕಾರ ನೀಡುವ ಏಕೈಕ ಪಕ್ಷ ಜೆಡಿಎಸ್ ಎನ್ನುವುದು ಸತ್ಯ, ಪಕ್ಷದ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಬೆಳ್ಳಿಲೋಕೇಶ್ ಅವರ ಸೇವೆಯನ್ನು ಗುರುತಿಸಿ, ವರಿಷ್ಠರು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿ ಜವಾಬ್ದಾರಿಯನ್ನು ನೀಡಿದ್ದಾರೆ, ನಮ್ಮ ಜಿಲ್ಲೆಯವರು ಪಕ್ಷ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವುದು ಕಾರ್ಯಕರ್ತರು, ಮುಖಂಡರಿಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿಲೊಕೇಶ್ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಸಮಾಜದ ಸಾಮರಸ್ಯವನ್ನು ಹಾಳುವುದನ್ನೇ ಕೆಲವು ವಿಚ್ಛಿದ್ರಕಾರ ಶಕ್ತಿಗಳು ಮತ್ತು ವ್ಯಕ್ತಿಗಳು ಕಾಯಕವನ್ನಾಗಿಸಿವೆ, ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ರಾಜ್ಯದಲ್ಲಿ ಅಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಲು ಹಾತೊರೆಯುತ್ತಿರುವ ಶಕ್ತಿಗಳ ವಿರುದ್ಧ ಜೆಡಿಎಸ್ ಈ ಸತ್ಯಾಗ್ರಹ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದರು.

ಸಮಾಜದಲ್ಲಿ ಸಂಘರ್ಷಗಳ ಮೂಲಕ ಕಂದಕವನ್ನು ನಿರ್ಮಾಣ ಮಾಡಿರುವ ಶಕ್ತಿಗಳನ್ನು ಮಟ್ಟಹಾಕಿ ಸಮಾಜವನ್ನು ಸಾಮರಸ್ಯದಡೆಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ, ಗಾಂಧೀಜಿ ಅವರ ಅಹಿಂಸಾ ಮಾರ್ಗಗಳ ಹೋರಾಟ ಮತ್ತು ವಿಚಾರಧಾರೆಯನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಅಗತ್ಯವಿದ್ದು, ಜೆಡಿಎಸ್ ಈ ನಿಟ್ಟಿನಲ್ಲಿ ಎಲ್ಲ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕನಿಷ್ಠ ೨ ಗಂಟೆ ಸತ್ಯಾಗ್ರಹವನ್ನು ನಡೆಸಲು ಮುಂದಾಗಿದ್ದು, ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಪಾಲಿಕೆ ಉಪಮೇಯರ್ ಶ್ರೀನಿವಾಸ್ ಮಾತನಾಡಿ, ಪಕ್ಷ ಹಮ್ಮಿಕೊಂಡಿರುವ ಸಾಮರಸ್ಯಕ್ಕಾಗಿ ಸತ್ಯಾಗ್ರಹವನ್ನು ಯಶಸ್ವಿಗೊಳಿಸಲು ಪಾಲಿಕೆಯ ಜೆಡಿಎಸ್ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದು, ಪಕ್ಷದ ಅಣತಿಯನ್ನು ಪಾಲಿಸುವುದಾಗಿ ತಿಳಿಸಿದರು.

ಈ ವೇಳೆ ತನ್ವೀರ್ ರೆಹಮಾನ್ ಖಾನ್ ಅವರನ್ನು ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಬೆಳ್ಳಿ ಲೊಕೇಶ್ ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ಕಾರ್ಯಾಧ್ಯಕ್ಷ ಹಾಲನೂರು ಅನಂತ್, ಪಾಲಿಕೆ ಸದಸ್ಯರಾದ ಹೆಚ್‌ಡಿಕೆ ಮಂಜುನಾಥ್, ಧರಣೇಂದ್ರಕುಮಾರ್, ಇಸ್ಮಾಯಿಲ್, ಕೃಷ್ಣಮೂರ್ತಿ, ದೇವರಾಜು, ಗಂಗಣ್ಣ, ತಾಹೇರಾ ಬಾನು, ಅನೀಸ್, ಮಲಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!