ಗುಬ್ಬಿ : ತಾಲ್ಲೂಕು ಕಡಬ ಗ್ರಾಮದ ಪೇಟೆ ಬೀದಿಯಲ್ಲಿ ರಸ್ತೆ ಮಧ್ಯೆ ದಿಢೀರ್ ಕುಸಿತ ಉಂಟಾಗಿ ದೊಡ್ಡ ಕಂದಕ ಸೃಷ್ಟಿಯಾಗಿದೆ. ಜೊತೆಯಲ್ಲಿ ನೀರು ಸಹ ಉಕ್ಕಿ ಬರುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಬಹಳ ವರ್ಷದ ನಂತರದಲ್ಲಿ ತುಂಬಿ ಹರಿದ ಕಡಬ ಕೆರೆ ಪುರಾಣ ಪ್ರಸಿದ್ದವಾಗಿದೆ. ಕಂದಕ ಕಂಡ ಸ್ಥಳದಲ್ಲಿ ಈ ಹಿಂದೆ ದೊಡ್ಡ ಬಾವಿ ಇತ್ತು. ಕಡಬ ಗ್ರಾಮಕ್ಕೆ ಕುಡಿಯುವ ನೀರು ಕೊಡುವ ಬಾವಿ ಬತ್ತಿದ ಮೇಲೆ ಮುಚ್ಚಲಾಗಿತ್ತು. ಈಗ ಬಾವಿಯಲ್ಲಿ ಉಕ್ಕಿರುವ ನೀರು ಕಂದಕ ಸೃಷ್ಟಿಸಿದೆ. ಬಾವಿ ಜಾಗ ಸಂಪೂರ್ಣ ಕಸಿಯಿತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಾರಿ ಸುರಿದ ಮಳೆಯಿಂದ ಕಸಿದ ಈ ಸ್ಥಳ ಕೆರೆಗೆ ಹತ್ತಿರವಾಗಿದೆ. ನೂರು ವರ್ಷದ ಹಳೆಯ ಬಾವಿ ಮುಚ್ಚಿ ಹಲವು ವರ್ಷಗಳೇ ಕಳೆದಿದ್ದರೂ ಅಂತರ್ಜಲ ಉಕ್ಕಿ ಬಾವಿ ಇರುವಿಕೆ ತೋರುತ್ತಿದೆ.

ಕೋಟೆ ನಡುವೆ ಇದ್ದ ಕಡಬ ಗ್ರಾಮ ಸಮೃದ್ಧವಾಗಿದ್ದ ಕಾಲದಲ್ಲಿ ಈ ಬಾವಿ ಜನರ ಜೀವ ಜಲ ನೀಡಿತ್ತು. ಈಗ ಕಡಬ ಪೇಟೆ ಬೀದಿ ಜನನಿಬೀಡ ಪ್ರದೇಶವಾಗಿದೆ. ಬೆಳಿಗ್ಗೆ 8 ಗಂಟೆ ಸಮಯದಲ್ಲಿ ದಿಢೀರ್ ಕುಸಿದ ರಸ್ತೆಯಲ್ಲಿ ಯಾರೋ ಓಡಾಡಿರದ ಕಾರಣ ಯಾವುದೇ ಅಪಾಯ ಕಂಡಿಲ್ಲ. ಆದರೆ ಕಂದಕ ನಿಧಾನವಾಗಿ ದೊಡ್ಡದಾಗಿ ನಿರ್ಮಾಣವಾಗುತ್ತಿದೆ. ಅಕ್ಕಪಕ್ಕದ ಅಂಗಡಿ ಮುಂಗಟ್ಟು ಸಹ ಕಸಿಯುವ ಸಂಭವವಿದೆ ಎಂದು ಸ್ಥಳೀಯ ವ್ಯಾಪಾರಿ ಗೋಪಾಲಕೃಷ್ಣ ಶೆಟ್ಟಿ, ಮಧು ಶೆಟ್ಟಿ ತಮ್ಮ ಅಳಲು ತೋಡಿಕೊಂಡರು.
ವರದಿ: ಜಿ.ಆರ್.ರಮೇಶ್ ಗೌಡ, ಗುಬ್ಬಿ.