ಗುಬ್ಬಿ: ತಾಲ್ಲೂಕಿನ ಚಂಗಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮೀನಾಕ್ಷಿ ನರಸಿಂಹಮೂರ್ತಿ ಅವಿರೋಧ ಆಯ್ಕೆಯಾದರು.
ಗ್ರಾಪಂ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು. ಈ ಹಿಂದೆ ಅಧ್ಯಕ್ಷರಾಗಿದ್ದ ಚಂದ್ರಮ್ಮ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಪದಚ್ಯುತಿ ಮಾಡಲಾಗಿತ್ತು. ಈ ರೀತಿ ತೆರವಾದ ಎಸ್ಸಿ ಮಹಿಳಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಸದಸ್ಯರ ಪೈಕಿ 8 ಮಂದಿ ಹಾಜರಾತಿ ಮೂಲಕ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಚಂಗಾವಿ ಕ್ಷೇತ್ರದ ಮೀನಾಕ್ಷಿ ನರಸಿಂಹಮೂರ್ತಿ ಅವಿರೋಧ ಆಯ್ಕೆಯಾದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷೆ ಮೀನಾಕ್ಷಿ ನರಸಿಂಹಮೂರ್ತಿ, ಚಂಗಾವಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ದನಾಗಿರುತ್ತೇನೆ. ಕುಡಿಯುವ ನೀರು, ಬೀದಿ ದೀಪ ಜೊತೆಗೆ ಕಸ ವಿಲೇವಾರಿ ಮೂಲಕ ಸ್ವಚ್ಚತೆ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದ ಅವರು ಅರ್ಹ ಫಲಾನುಭವಿಗಳಿಗೆ ಮನೆ ಒದಗಿಸುವ ಕಾರ್ಯ ಮಾಡಲಾಗುವುದು. ಯಾವುದೇ ಲೋಪವಿಲ್ಲದಂತೆ ಪಕ್ಷಾತೀತ ನಿಲುವು ತಾಳುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಉಪಾಧ್ಯಕ್ಷೆ ಪದ್ಮ ಶೇಖರ್, ಸದಸ್ಯರಾದ ಅವ್ವೆರಹಳ್ಳಿ ಕೃಷ್ಣ, ಗಂಗಣ್ಣ, ಲತಾ, ಅಲ್ತಾಫ್, ಮುಖಂಡರಾದ ಚಂಗಾವಿ ಕುಮಾರ್, ರಾಘವೇಂದ್ರ, ಲೋಕೇಶ್, ಜೆಡಿಎಸ್ ಹೋಬಳಿ ಅಧ್ಯಕ್ಷ ಬೋರಪ್ಪನಹಳ್ಳಿ ಕುಮಾರ್, ಕೃಷ್ಣಮೂರ್ತಿ, ಸಿದ್ದೇಗೌಡ, ಶೇಖರ್, ಜಯರಾಂ, ಚಂಗಾವಿ ನರಸಿಂಹಮೂರ್ತಿ, ಪಿಡಿಓ ನಾಗರಾಜು ಇತರರು ಇದ್ದರು.
ವರದಿ: ಜಿ.ಆರ್.ರಮೇಶ್ ಗೌಡ, ಗುಬ್ಬಿ.