ಮಧುಗಿರಿ : ದೇಶದಲ್ಲಿ 32 ಲಕ್ಷಕ್ಕೂ ಹೆಚ್ಚು ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಪಾವಗಡ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದಜೀ ಮಹಾರಾಜ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಕುಂಚಿಟಿಗ ಒಕ್ಕಲಿಗ ಸಮುದಾಯ ಭವನದಲ್ಲಿ ಸೋಮವಾರ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್, ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮ ಇವರ ಸಹಯೋಗದೊಂದಿಗೆ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಮತ್ತು ಫ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅನ್ನಪೂರ್ಣ ಪೌಷ್ಠಿಕ ಆರೋಗ್ಯ ಮಿಕ್ಸ್ ವಿತರಿಸುವ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ಅಪೌಷ್ಠಿಕತೆಯಿಂದಾಗಿ ಬಹಳಷ್ಟು ಆರೋಗ್ಯದ ತೊಂದರೆಗಳು ಕಂಡುಬರಲಿದ್ದು, ಇಂದು ಬಹಳಷ್ಟು ಮಕ್ಕಳೂ ಸಹ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ ಇದನ್ನು ಮನಗಂಡು ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ಮೂಲಕ ಶೈಕ್ಷಣಿಕ ಜಿಲ್ಲೆಯ ಮಧುಗಿರಿ, ಕೊರಟಗೆರೆ, ಶಿರಾ ಪಾವಗಡ ತಾಲೂಕಿನ 92677 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನ್ನಪೂರ್ಣ ಪೌಷ್ಠಿಕ ಆರೋಗ್ಯ ಮಿಕ್ಸ್ ನ್ನು ಶಾಲೆಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದೊಂದು ಉತ್ತಮ ಪೌಷ್ಟಿಕ ಆಹಾರವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಉಂಟಾಗುವ ಪೌಷ್ಟಿಕಾಂಶದ ಕೊರತೆ ನೀಗಲಿದೆ. ಈ ಸಂಸ್ಥೆಯ ಮೂಲಕ ಈಗಾಗಲೇ ದೇಶದ 10 ಲಕ್ಷ ಮಕ್ಕಳಿಗೆ ಪೌಷ್ಟಿಕ ಆರೋಗ್ಯ ಮಿಕ್ಸ್ ವಿತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯ ಎಲ್ಲ ಮಕ್ಕಳಿಗೂ ವಿತರಿಸುವ ಚಿಂತನೆ ನಡೆಸಿದ್ದು, ಅಧಿಕಾರಿಗಳು ಈ ಯೋಜನೆಯಲ್ಲಿ ಕೈ ಜೋಡಿಸುವ ಮೂಲಕ ಯಾವುದೇ ರೀತಿಯ ತೊಂದರೆಯುಂಟಾಗದಂತೆ ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು. ಈ ಯೋಜನೆಗೆ ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲಾ ಸಹಕಾರವನ್ನೂ ಒದಗಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿರುವುದು ಶ್ಲಾಘನೀಯ ಎಂದರು.
ಈಗಾಗಲೇ ಇನ್ಫೋಸೀಸ್ ಸಹಯೋಗದೊಂದಿಗೆ ಅತ್ಯಂತ ಹಿಂದುಳಿದ 25 ಶಾಲೆಗಳಲ್ಲಿ ಹೈಟೆಕ್ ಶಿಕ್ಷಣ ನೀಡಲಾಗುತ್ತಿದ್ದು, ಇದನ್ನು ಮತ್ತೆ 25 ಶಾಲೆಗಳಿಗೆ ವಿಸ್ತರಿಸಲಾಗುವುದು ಇದೊಂದು ಒಂದು ಕೋಟಿ ರೂ ವೆಚ್ಚದ ಯೋಜನೆ ಎಂದು ಜಪಾನಂದ್ ಮಹಾರಾಜ್ ಮಾಹಿತಿ ನೀಡಿದರು.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತನಾಡಿ ಮಕ್ಕಳ ಆರೋಗ್ಯವೇ ನಮ್ಮ ಗುರಿ ಎಂಬ ದ್ಯೇಯದೊಂದಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಆರೋಗ್ಯ ಮಿಕ್ಸ್ ವಿತರಿಸುತ್ತಿದ್ದು, ರಾಜ್ಯದ ಎಲ್ಲ ಮಕ್ಕಳಿಗೂ ಇದನ್ನು ವಿತರಿಸುವಂತಾಗಲು, ಸರ್ಕಾರವೂ ಕೈ ಜೋಡಿಸಬೇಕು ಎಂದು ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದು, ಈಗಾಗಲೇ 5 ಲಕ್ಷ ಮಕ್ಕಳಿಗೆ ಆರೋಗ್ಯ ಮಿಕ್ಸ್ ವಿತರಿಸಲಾಗಿದೆ ಎಂದು ತಿಳಿಸಿದ್ದು, ಮಕ್ಕಳ ಆರೋಗ್ಯ ದೃಷ್ಟಿಯಿಂದ ದೇಶಿಯ ಆಕಳ ಹಾಲು ಬಳಸಿ ಮಿಕ್ಸ್ ತಯಾರು ಮಾಡಲಾಗಿದ್ದು, ಮಕ್ಕಳಿಗೆ ಹಾಲಿನ ಜೊತೆಗೆ ವಿತರಣೆ ಮಾಡಲಾಗುತ್ತಿದೆ. ಇದಕ್ಕೆ ತಿಂಗಳಿಗೆ 2.5 ಕೋಟಿ ವೆಚ್ಚ ತಗುಲುತ್ತದೆ ಎಂದರೂ 10 ತಿಂಗಳಿಗೆ 25 ಕೋಟಿ ವೆಚ್ಚವಾಗಲಿದೆ. ಸಮಾಜದ ಏಳಿಗೆಗೆ ದುಡಿಯುತ್ತಿರುವ ಸ್ವಾಮಿಜಿ ಮಾದರಿಯಾಗಿದ್ದು, ಜಿಲ್ಲೆಯ ಎಲ್ಲಾ ಮಕ್ಕಳಿಗೂ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸಂಸ್ಥೆಗೆ ಸರ್ಕಾರದ ವತಿಯಿಂದ ಹಾಲಿನ ಪೌಡರ್ ವಿತರಿಸಿ ಹೆಲ್ತ್ ಮಿಕ್ಸ್ ತಯಾರಿಸಿ ವಿತರಣೆಗೆ ಚಿಂತನೆ ನಡೆಸಲಾಗುವುದು ಎಂದರು.
ಕರೋನಾದಿಂದಾಗಿ 2 ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಶಿಕ್ಷಣದ ಮೇಲೆ ಗಂಬೀರ ಪರಿಣಾಮ ಬೀರಿದ್ದು, ಇದನ್ನು ಸರಿಪಡಿಸಲು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗೆ ಸ್ವತಂತ್ರ ಪೂರ್ವದಿಂದಲೂ ನಡೆಯುತ್ತಿದ್ದು, ಭಾರತೀಯ ಶಿಕ್ಷಣ ಪದ್ದತಿಗೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಗುಣಮಟ್ಟದ ಶಿಕ್ಷಣ ಸಾಧ್ಯ. ಇದನ್ನು ಸರಿಪಡಿಸಲು 75 ವರ್ಷ ಬೇಕಾಯಿತು. ಈಗ ದೇಶದಲ್ಲಿ
ಸಮಗ್ರ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ಇದರಿಂದ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುತ್ತಿದೆ ಎಂದರು.
ಸತ್ಯ ಸಾಯಿ ಸೇವಾ ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆರೋಗ್ಯಕರ ದೇಶದ ಗುರಿ ನಮ್ಮ ಉದ್ದೇಶವಾಗಬೇಕು. ಶಾಲೆ ಪ್ರಾರಂಭದ ದಿನವೇ ಹೆಲ್ತ್ ಮಿಕ್ಸ್ ನ್ನು ಮಕ್ಕಳಿಗೆ ಪ್ರಸಾದದ ರೀತಿಯಲ್ಲಿ ವಿತರಿಸಲು ಪ್ರತಿಯೊಬ್ಬರೂ ಶ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಎಂಎಲ್ಸಿ ಚಿದಾನಂದಗೌಡ ಮಾತನಾಡಿ ಕೆಲ ಕಿಡಿಗೇಡಿಗಳು
ಶಿಕ್ಷಣ ಇಲಾಖೆ, ಮತ್ತು ಶಿಕ್ಷಣ ಸಚಿವರ ಮೇಲೆ ಹಲವಾರು ಆರೋಪಗಳನ್ನು ಮಾಡಿದಾಗ ಅದನ್ನು ನಿಬಾಯಿಸಿ, ಶಿಕ್ಷಣ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗೆ ತಂದವರು ಶಿಕ್ಷಣ ಸಚಿವರು. ಇದು ಮುಖ್ಯ ಮಂತ್ರಿಗಳ, ಶಿಕ್ಷಣ ಸಚಿವರ ಮತ್ತು ಸರ್ಕಾರದ ಕಾರ್ಯ ವೈಖರಿಯ ಬದ್ದತೆಯನ್ನು ತೋರಿಸುತ್ತದೆ. ನಮ್ಮ ಸರ್ಕಾರ 15 ಸಾವಿರ ಶಿಕ್ಷಕರನ್ನು ಒಂದು ತಿಂಗಳ ಒಳಗೆ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ವಿನೂತನ ಮಾದರಿಯ ಕಲಿಕಾ ಚೇತರಿಕೆ ಮೂಲಕ ಮಕ್ಕಳ ಕಲಿಕೆಗೆ ಕ್ರಮ ಕೈಗೊಳ್ಳಲಾಗಿದೆ. ನಾನು ಎಂಎಲ್ಸಿ ಆದ ನಂತರ ನನ್ನ ಮೊದಲನೇ ಅನುದಾನವನ್ನು ನಾನು ಓದಿದ ಸರ್ಕಾರಿ ಶಾಲೆಗೆ ನೀಡುವ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕ್ರಮ ಕೈಗೊಂಡಿದ್ದು, ದಸರಾ ರಜೆ ಕಳೆದ ನಂತರ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಖಾಸಗಿ ಶಾಲೆಗಳು ಶಿಕ್ಷಣದ ಸಮಸ್ಯೆಗೆ ಪರಿಹಾರವಲ್ಲ. ನಾನು ಖಾಸಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳಸಿದ್ದರೂ ನನ್ನ ಪಯಣ ಸರ್ಕಾರಿ ಶಾಲೆಗಳ ಅಬಿವೃದ್ದಿಯ ಕಡೆಗೆ ಶಿರಾ ಮಾತ್ರವಲ್ಲ ಮಧುಗಿರಿ ತಾಲೂಕಿನಲ್ಲೂ ಮಾದರಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಕ್ರಮ ಕೊಗೊಳ್ಳಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆ.
ನಮ್ಮ ಸರ್ಕಾರಿ ಶಾಲೆಗಳಲ್ಲೂ ಮಾದರಿ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿದೆ. ದೇಶದ ಸೊಗಡಿನ ಶಿಕ್ಷಣ, ಸಂಸ್ಕಾರ ಕಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
ಸತ್ಯ ಸಾಯಿ ಟ್ರಸ್ಟ್ ನ ಜಯಪ್ರಕಾಶ್, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿದರು. ಡಿಡಿಪಿಐ ಕೆ.ಜಿ. ರಂಗಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ, ತಹಶೀಲ್ದಾರ್ ಸುರೇಶ್ ಆಚಾರ್, ಕಾರ್ಯದರ್ಶಿ ಆನಂದ್ ಸಾಯಿ, ಜಯಪ್ರಕಾಶ್, ಡಿವೈಪಿಸಿ ವೆಂಕಟೇೇಶ್ ನಾಯ್ಡು , ರಕ್ತದಾನಿ ಶಿಕ್ಷಕರ ಬಳಗದ ಶಶಿಕುಮಾರ್ ಇತರರಿದ್ದರು