ನಿಮ್ಮ ಜೀವನದ ಗುರಿ ಸುಧಾಮೂರ್ತಿಯಾಗಬೇಕು: ಸ್ವಾಮಿ ಜಪಾನಂದಜಿ ಮಹಾರಾಜ್

ತುಮಕೂರು: ದೇಶದಲ್ಲಿ ಎಲ್ಲೇ ನೋವಿದ್ದರೂ ಕಷ್ಟ ಕಾರ್ಪಣ್ಯವಿದ್ದರೂ ಮೊದಲು ಸ್ಪಂದಿಸುವವರು ಶ್ರೀಮತಿ ಸುಧಾಮೂರ್ತಿಯವರು. ನಮ್ಮ ಪಾವಗಡದ ರಾಮಕೃಷ್ಣ ಸೇವಾಶ್ರಮ ಕೈಗೊಳ್ಳುವ ಸೇವಾ ಕಾರ್ಯಕ್ರಮಗಳಿಗೆ ಸುಧಾ ಮೂರ್ತಿಯವರ ಇನ್‌ಫೋಸಿಸ್ ತಂಡ ನಮಗೆ ಸಹಾಯ ಮಾಡಲು ಬರುತ್ತದೆ. ಸುಧಾಮೂರ್ತಿಯವರು ಬರೀ ಸುಧಾಮೂರ್ತಿಯಲ್ಲಾ ಸೇವಾಮೂರ್ತಿ, ಕರುಣಾಮೂರ್ತಿ, ದಯಾಮೂರ್ತಿಯಾಗಿದ್ದಾರೆ. ಇನ್ಫೋಸಿಸ್ ಅಂತಹ ದೊಡ್ಡ ಸಂಸ್ಥೆಯ ಒಡತಿಯಾಗಿದ್ದರೂ ಅವರು ನೋಡಲು ತುಂಬಾ ಸರಳ. ನಾರಾಯಣಮೂರ್ತಿ, ಸುಧಾಮೂರ್ತಿ, ರತನ್‌ಟಾಟಾ ಮುಂತಾದ ಮಹನೀಯರು ನಿಮ್ಮ ಜೀವನದ ಗುರಿಯಾಗಬೇಕು ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜಿ ಮಹಾರಾಜ್ ರವರು ಮಕ್ಕಳಿಗೆ ಕರೆ ನೀಡಿದರು.

ಅವರು ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರವು ಇನ್ಫೋಸಿಸ್ ಫೌಂಡೇಶನ್, ಮೆ. ಮೂರ್ತಿ ಫೌಂಡೇಶನ್, ಡೇಮಿಯನ್ ಫೌಂಡೇಶನ್, ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ, ಕರ್ನಾಟಕ, ಹಾಗೂ ಜಿಲ್ಲಾ ಕುಷ್ಠರೋಗಿ ನಿರ್ಮೂಲನಾಧಿಕಾರಿಗಳು ತುಮಕೂರು ಇವರುಗಳ ಸಹಕಾರದೊಂದಿಗೆ ತುಮಕೂರಿನ ಆರ್.ಟಿ.ನಗರದ ರವೀಂದ್ರ ಕಲಾ ನಿಕೇತನದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧೀಜಿ ಯವರ ೧೫೩ ನೇ ಜಯಂತಿ ಆಚರಣೆ ಪ್ರಯುಕ್ತ ಕುಷ್ಠರೋಗಿಗಳಿಗೆ ನೂತನ ವಸ್ತ್ರ, ಸಾಧನಗಳು, ಶುಚಿತ್ವದ ಕಿಟ್ ಪಾದರಕ್ಷೆ ಮತ್ತು ದವಸ ಧಾನ್ಯದ ಕಿಟ್‌ಗಳನ್ನು ವಿತರಣೆ ಮಾಡಿ ಮಾತನಾಡುತ್ತಾ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಅವರ ಇಷ್ಟವಾದ ಕೆಲಸ ಕುಷ್ಠರೋಗಿಗಳಿಗೆ ಆರೈಕೆ, ಔಷಧಿ ವಿತರಣೆ, ಆಹಾರ ವಿತರಣೆಯನ್ನೂ ನಾವಿಂದು ಮಾಡಿದ್ದೇವೆ. ಕುಷ್ಠರೋಗವು ಭಾರತದಿಂದ ನಿರ್ಮೂಲನೆಯಾಗಬೇಕು. ಕುಷ್ಠರೋಗವು ಭಾರತದ ಕರ್ನಾಟಕ, ಆಂದ್ರ, ಬಿಹಾರದಲ್ಲಿ ಕಂಡುಬರುತ್ತದೆ. ನಾವು ತಂತ್ರಜ್ಞಾನದಲ್ಲಿ ಮುಂದೆ ಹೋಗುತ್ತಿರುವಂತೆ ಹಾಗೆಯೇ ಹೃದಯವಂತಿಕೆಯಲ್ಲಿ ಹಿಂದೆ ಹೋಗುತ್ತಿದ್ದೇವೆ. ಹೃದಯವಂತಿಕೆಯನ್ನೆ ಮರೆತು ಹೋಗಿದ್ದೇವೆ. ಮಕ್ಕಳಿಗೆ ಈ ದೇಶವನ್ನು ನಿಮ್ಮ ಕೈಗೆ ಕೊಡುತ್ತಿದ್ದೇವೆ ಈ ದೇಶದ ಮಾಲೀಕರು ನೀವಾಗಿದ್ದೀರಿ ಇದೊಂದು ಜೀವನದ ಪರಿವರ್ತನಾ ಕಾರ್ಯಕ್ರಮವಾಗಿದ್ದು ಇಲ್ಲೇ ನಿಜವಾದ ಗಾಂಧೀ ಜಯಂತಿಯನ್ನು ಆಚರಿಸಿದ ಭಾರತೀಯರು ನೀವುಗಳಾಗಿದ್ದೀರಿ ಎಂದು ಹೇಳಿದರು.

ಈ ಸಮಾರಂಭದಲ್ಲಿ ಪ್ರಾಸ್ರಾವಿಕ ನುಡಿಗಳನ್ನಾಡಿದ ಹಿರಿಯ ಲೇಖಕರು ಹಾಗೂ ಚಿಂತಕರಾದ ವಿದ್ಯಾವಾಚಸ್ಪತಿಗಳಾದ ಡಾ. ಕವಿತಾಕೃಷ್ಣ ರವರು ಮಾತಾನಾಡುತ್ತಾ ಕೂಡಿ ಬಾಳುವ, ಕೂಡಿ ಉಣ್ಣುವ, ಕೂಡಿ ದುಡಿಯುವ ತತ್ವವನ್ನು ಜಗತ್ತಿನಲ್ಲಿ ಬಿತ್ತಲು ಮಹಾತ್ಮರು ಉದಯಿಸಿದರು. ಅವರಲ್ಲಿ ಮಹಾತ್ಮ ಗಾಂಧಿಯವರು ಒಬ್ಬರು. ಗಾಂಧೀಜಿಯವರು ಒಂದು ಮಾನವೀಯತೆ ಮೌಲ್ಯದ ಶಿಖರವಾಗಿದ್ದರು. ಮಹಾತ್ಮ ಗಾಂಧೀಜಿಯವರು ಸೇವೆಯನ್ನು ಕಾಯಾ ವಾಚಾ ಮನಸಾ ಪರಿಶುದ್ಧರಾಗಿ ಮಾಡಿದವರು. ಬದುಕಿನುದ್ದಕ್ಕೂ ಮಾನವ ಕುಲ ಸರ್ವೇ ಜನಾಃ ಸುಖಿನೋ ಭವಂತು ಎಂಬ ತತ್ವವನ್ನು ಜನಸಾಮಾನ್ಯರಲ್ಲಿ ಬಿತ್ತುತ್ತಾ ಬಾಳಿ ಸ್ವಾತಂತ್ರ್ಯದ ಬೆಳಕಾಗಿ ಶಾಂತಿ ಮಂತ್ರದ ಕಹಳೆ ಊದಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಭೂಪ ಮಹಾತ್ಮಗಾಂಧೀಜಿ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಎಂ. ಬಸವಯ್ಯ ರವರು ಮಾತನಾಡುತ್ತಾ ಜಪಾನಂದ ಸ್ವಾಮೀಜಿ ನನ್ನ ಜೀವಿತದಲ್ಲಿ ಕಂಡಿರುವ ಏಕಮಾತ್ರ ಸೇವಾನಿರತ ಸನ್ಯಾಸಿ ಜಪಾನಂದಜೀ ಮಹಾರಾಜ್ ಎನ್ನುವ ಹೆಸರಿನ ಬದಲು ಜಪಾನಂದ ಮಹಾತ್ಮಾಜಿ ಎಂದು ಕರೆಯಲು ಇಚ್ಚಿಸುತ್ತೇನೆ. ಎಲ್ಲರೂ ಇದೇ ರೀತಿ ಕರೆಯಿರಿ. 152 ವರ್ಷಗಳ ನಂತರ ನಾವು ಅಭಿನವ ಮಹಾತ್ಮಗಾಂಧಿಯನ್ನು ಜಪಾನಂದರಲ್ಲಿ ಕಾಣುತ್ತಿದ್ದೇವೆ. ಸ್ವಾಮಿ ಜಪಾನಂದರು ಮಾಡಿದ ಸೇವೆಯನ್ನು ಬೇರೆ ಯಾವ ಸ್ವಾಮೀಜಿಯು ಮಾಡಿಲ್ಲ. ಇವರನ್ನು ನೋಡುತ್ತಿರುವುದೇ ನಮ್ಮ ಪುಣ್ಯ ಎಂದು ಹೇಳಿದರು.

ಈ ಸಮಾರಂಭದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಶ್ರೀದೇವಿ ಚಂದ್ರಿಕಾ, ಡಾ. ಮಹೇಶ್, ಬೆಂಗಳೂರಿನ ಇನ್ಫೋಸಿಸ್‌ನ ಶರತ್ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ವ್ಯವಸ್ಥಾಪಕ ನಾಗರಾಜ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಸಂಗೀತ ವಿದುಷಿ ಲಲಿತಾಚಲಂ ಹಾಗೂ ಗಾಯಕಿ ರೂಪ ನಾಗೇಂದ್ರ ಮತ್ತು ತಂಡದವರು ಗಾಂಧೀಜಿಯವರ ಭಜನೆಗಳನ್ನು ಹಾಡಿದರು.

ಈ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಕುಷ್ಠರೋಗಿಗಳು ಭಾಗವಹಿಸಿದ್ದರು. ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ತಂಡ ಹಾಗೂ ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಜೆ.ಪಿ.ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಅಬ್ಬಿನಹೊಳೆ ಸುರೇಶ್ ಸ್ವಾಗತಿಸಿದರು. ಕವಿ ವಿ.ಪಿ.ಕೃಷ್ಣಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!