ವಿದ್ಯುತ್ ಖಾಸಗೀಕರಣ ಖಂಡಿಸಿ ಪ್ರತಿಭಟನೆ

ತುಮಕೂರು: ಕೇಂದ್ರ ಸರಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿ,ಅಡಿಕೆ ಅಮದಿಗೆ ವಿರೋಧ ವ್ಯಕ್ತಪಡಿಸಿ, ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ಬೆಸ್ಕಾಂ ಎಇಇ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ನಗರದ ಕರಿಬಸವೇಶ್ವರ ವೃತ್ತದಿಂದ ತುಮಕೂರು ತಾಲೂಕು ಎಇಇ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ರೈತ ಸಂಘದ ಕಾರ್ಯಕರ್ತರು, ಸರಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಕ್ರಮವನ್ನು ವಿರೋಧಿಸಿ, ಘೋಷಣೆ ಕೂಗಿದರು.

ಎಇಇ ಕಚೇರಿ ಬಳಿ ಸಮಾವೇಶಗೊಂಡ ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು,ವಿದ್ಯುತ್ ಖಾಸಗೀಕರಣಕ್ಕೆ ಈಗಾಗಲೇ ಕೇಂದ್ರ ಸರಕಾರ ಸಂಸತ್ತಿನ ಉಪಸಮಿತಿಯ ಮುಂದೆ ಬಿಲ್ ಮಂಡಿಸಿದೆ. ವಿದ್ಯುತ್ ಖಾಸಗಿ ಬಿಲ್ ಎನಾದರೂ ಜಾರಿಗೆ ಬಂದರೆ, ಇಡೀ ದೇಶದಲ್ಲಿ ಆಹಾರ ಸ್ವಾವಲಂಬನೆ ಹಾಳಾಗುವುದಲ್ಲದೆ, ರೈತರು, ಬಡವರು ವಿದ್ಯುತ್ ಬಿಲ್ ಭರಿಸಲಾಗದೆ ಬೀದಿಗೆ ಬೀಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದರು.

ಕೇಂದ್ರ ಸರಕಾರ ವಿದ್ಯುತ್ ಖಾಸಗೀಕರಣದ ಬಗ್ಗೆ ಈಗಾಗಲೇ ರಾಷ್ಟ್ರದಲ್ಲಿರುವ ರಾಜ್ಯಗಳ ಅಭಿಪ್ರಾಯ ಕೇಳಿದ್ದು, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿವೆ. ಆದರೆ ಕರ್ನಾಟಕ ಮಾತ್ರ ಇದುವರೆಗೂ ತನ್ನ ಅಭಿಪ್ರಾಯ ತಿಳಿಸಿಲ್ಲ.ಕೂಡಲೇ ರಾಜ್ಯ ಸರಕಾರ ತನ್ನ ಮೌನ ಮುರಿದು ತನ್ನ ಅಭಿಪ್ರಾಯ ತಿಳಿಸಬೇಕು.ಯಾವುದೇ ಕಾರಣಕ್ಕೂ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದಿಲ್ಲ ಎಂಬು ಘೋಷಣೆಯನ್ನು ಮಾಡಬೇಕೆಂಬುದು ರಾಜ್ಯದ ರೈತರ ಆಗ್ರಹವಾಗಿದೆ ಎಂದು ಏ.ಗೋವಿಂದರಾಜು ತಿಳಿಸಿದರು.

ರಾಜ್ಯದಲ್ಲಿ ಸುಮಾರು 45 ಲಕ್ಷ ಕೊಳವೆ ಭಾವಿಗಳನ್ನು ಕೊರೆದು ರೈತರು 600 ಟಿ.ಎಂ.ಸಿ ಯಷ್ಟು ಅಂತರ ಜಲವನ್ನು ಎತ್ತಿ ಒಂದು ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಯಾಗಿಸಿ, ಭತ್ತ, ಕಬ್ಬು ಸೇರಿದಂತೆ ಆಹಾರದ ಬೆಳೆಗಳನ್ನು ಬೆಳೆದು ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಒಂದು ವೇಳೆ ವಿದ್ಯುತ್ ಖಾಸಗೀಕರಣವಾಗಿ ಸ್ಮಾರ್ಟ್ ಮೀಟರ್ ಅಳವಡಿಸಿದರೆ, ಬಿಲ್ ಕಟ್ಟಡಲಾಗದೆ ಬಹುತೇಕ ಐಪಿ ಸೆಟ್‌ಗಳು ನಿಂತು ಹೋಗಿ, ಆಹಾರದ ಕೊರತೆಯ ಜೊತೆಗೆ, ತೋಟಗಾರಿಕಾ ಬೆಳೆಗಳ ಮೇಲು ಪ್ರತಿಕೂಲ ಪರಿಣಾಮ ಉಂಟಾಗಲಿದೆ.ಅಲ್ಲದೆ, ಹಣ್ಣು, ತರಕಾರಿ, ಹೂವಿನ ಬೆಳೆಗಳ ಮೇಲೂ ದುಷ್ಪರಿಣಾಮ ಉಂಟಾಗಲಿದೆ. ಇದನ್ನು ಸರಕಾರ ಮನಗಂಡು, ವಿದ್ಯುತ್ ಖಾಸಗೀಕರಣಕ್ಕೆ ಎಂದಿಗೂ ಮುಂದಾಗಬಾರದು ಎಂಬುದು ರೈತರ ಆಗ್ರಹವಾಗಿದೆ ಎಂದರು.

ಪ್ರಧಾನಿ ಮೋದಿ ಅವರು ವಿದ್ಯುತ್ ಖಾಸಗೀಕರಣದ ಹೆಸರಿನಲ್ಲಿ ಸುಮಾರು 20 ಲಕ್ಷ ಕೋಟಿ ಕೆಪಿಟಿಸಿಎಲ್ ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳ ಆಸ್ತಿಯನ್ನು ತಮ್ಮ ಆಪ್ತರಿಗೆ ವಹಿಸಿಕೊಡಲು ಮುಂದಾಗಿದೆ.ಇದರಿಂದ ದೇಶದ ಅರ್ಥ ವ್ಯವಸ್ಥೆಯ ಮೇಲು ಕೆಟ್ಟ ಪರಿಣಾಮ ಬೀರಲಿದೆ ಎಂಬುದನ್ನು ಸರಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದು ಗೋವಿಂದರಾಜು ಆಗ್ರಹಿಸಿದರು.

ಕೇಂದ್ರ ಸರಕಾರ ಅಡಿಕೆಯನ್ನು ನೆರೆಯ ಭೂತಾನ್ ಮತ್ತಿತರ ದೇಶಗಳಿಂದ ಅಮದು ಮಾಡಿಕೊಳಲು ಮುಂದಾಗಿದೆ. ಇದರಿಂದ ದೇಶದ ಅಡಿಕೆ ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.ಈ ಹಿಂದಿನ ಸರಕಾರಗಳು ನೆರೆಯ ರಾಷ್ಟ್ರಗಳ ಅಡಿಕೆ ದೇಶಕ್ಕೆ ಬರದಂತೆ ಹೆಚ್ಚಿನ ಸುಂಕ ವಿಧಿಸಿ, ಅಮಧಾಗುವುದನ್ನು ತಡೆದಿದ್ದರು.ಆದರೆ ರೈತರ ಅದಾಯ ದ್ವಿಗುಣ ಮಾಡುವುದಾಗಿ ಹೇಳಿಕೊಳ್ಳುವ ಮೋದಿ ಸರಕಾರ, ಅಡಿಕೆ ಅಮದಿಗೆ ಅವಕಾಶ ನೀಡಿ, ದೇಶದ ಅಡಿಕೆ ಬೆಳೆಗಾರರ ಬಾಯಿಗೆ ಮಣ್ಣು ಹಾಕಲು ಹೊರಟಿದೆ.ಪ್ರಸುತ ಕ್ವಿಂಟಾಲ ಅಡಿಕೆ ೫೬ ಸಾವಿರ ರೂ ಇದ್ದು,ಮುಂದಿನ ದಿನಗಳಲ್ಲಿ ಇದು 25 ಸಾವಿರಕ್ಕೆ ಕುಸಿದರೂ ಆಶ್ಚರ್ಯವಿಲ್ಲ. ಒಂದು ವೇಳೆ ಹಾಗಾದರೆ ಅಡಿಕೆ ಬೆಳೆಗಾರರೂ ನಷ್ಟ ಹೊಂದಿ,ಆತ್ಮಹತ್ಯೆಯೊಂದೇ ಮಾರ್ಗವಾಗಲಿದೆ. ಹಾಗಾಗಿ ಸರಕಾರ ಎಚ್ಚೆತ್ತುಕೊಳ್ಳಬೇಕೆಂದು ರೈತರ ಆಗ್ರಹವಾಗಿದೆ ಎಂದರು.

ಈ ಸಂಬಂಧ ಮನವಿಯನ್ನು ಎಇಇ ಅವರಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್,ಪ್ರಧಾನ ಕಾರ್ಯದರ್ಶಿ ಟಿ.ಎಂ.ತಿಮ್ಮೇಗೌಡ, ಸಿ.ಎಸ್.ರಂಗಸ್ವಾಮಯ್ಯ, ಪುಟ್ಟಸ್ವಾಮಿ,ಈಶ್ವರಪ್ಪ, ಕೃಷ್ಣಪ್ಪ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಿಕುಮಾರ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!