ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆ ವಿರೋಧಿಸಿದ ಗುಬ್ಬಿ ರೈತ ಸಂಘ.

ಗುಬ್ಬಿ: ವಿದ್ಯುತ್ ಕ್ಷೇತ್ರ ಖಾಸಗೀಕರಣ ಹಾಗೂ ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆ ವಿರೋಧಿಸಿ ಗುಬ್ಬಿ ತಾಲ್ಲೂಕು ರೈತ ಸಂಘ ಘಟಕ ಪಟ್ಟಣದ ಬೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಮೆರವಣಿಗೆ ಮೂಲಕ ಬೆಸ್ಕಾಂ ಕಚೇರಿ ತಲುಪಿದ ರೈತ ಸಂಘದ ಸದಸ್ಯರು ಸರ್ಕಾರದ ಈ ಧೋರಣೆ ಖಂಡಿಸಿ ಘೋಷಣೆ ಕೂಗಿದರು. ಕೃಷಿ ಕ್ಷೇತ್ರ ಉಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ತಾಲ್ಲೂಕು ಆಡಳಿತ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಕಾರ್ಪೊರೇಟರ್ ವಲಯ ರಕ್ಷಣೆಗೆ ನಿಂತ ಆಡಳಿತಾರೂಢ ಬಿಜೆಪಿ ಸರ್ಕಾರ ಕೃಷಿ ಕ್ಷೇತ್ರದ ಬೆನ್ನು ಮೂಳೆ ಮುರಿದಿದೆ. ಶೇಕಡಾ 70 ರಷ್ಟು ರೈತಾಪಿ ವರ್ಗ ಇದ್ದು ಅಭಿವೃದ್ಧಿಗೆ ರೈತರೇ ಮುಖ್ಯ ಎನ್ನುತ್ತಾ ರೈತರ ಬದುಕು ಬೀದಿಗೆ ತಂದಿದೆ. ವಿದ್ಯುತ್ ಕಾಯಿದೆ ಬದಲಿಸಿ ಬಂಡವಾಳಶಾಹಿಗಳ ಕೈ ವಶಕ್ಕೆ ವಿದ್ಯುತ್ ವಲಯ ನೀಡಿ ಸೇವಾ ಕ್ಷೇತ್ರವನ್ನು ಕಮರ್ಷಿಯಲ್ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಒಂದು ವರ್ಷ ಕಾಲ ನಿರಂತರ ಹೋರಾಟ ಮಾಡಿದ ರೈತರ ಬಗ್ಗೆ ಕಾಳಜಿ ತೋರದೆ ರಾಜ್ಯದ 45 ಲಕ್ಷ ರೈತರ ಪಂಪ್ ಸೆಟ್ ಗೆ ಮೀಟರ್ ಅಳವಡಿಕೆ ಮಾಡುತ್ತಿದ್ದು ಹಲವು ಯೋಜನೆಯ ಉಚಿತ ವಿದ್ಯುತ್ ಕೂಡಾ ಸ್ಥಗಿತ ಆಗಲಿದೆ ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ ಹಾಕಿದ ಬಂಡವಾಳ ಪಡೆಯದೆ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಸೂಕ್ತ ಮಾರುಕಟ್ಟೆ ದೊರೆಯದೆ ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಮಾರ್ಟ್ ಮೀಟರ್ ಕೃಷಿಗೆ ತಂದರೆ ರೈತರು ಸಂಪೂರ್ಣ ಬೀದಿಗೆ ಬೀಳುತ್ತಾರೆ. ಅನ್ಯ ಕಸಬು ತಿಳಿಯದ ಮುಗ್ಧ ರೈತರ ಉಳಿಸುವ ಕೆಲಸ ಹೋರಾಟದ ಮೂಲಕ ಮಾಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳ ಬಿಚ್ಚಿಟ್ಟ ರೈತರು ಹಳೆಯ ಕಂಬ, ತಂತಿ ಬದಲಿಸಲು ಮೀನಾಮೇಷ ಎನಿಸುವ ಅಧಿಕಾರಿಗಳು ರೈತರಿಗೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದರು. ನಂತರ ತಾಲ್ಲೂಕು ಶಿರಸ್ತೇದಾರ್ ಶ್ರೀರಂಗ ಹಾಗೂ ಬೆಸ್ಕಾಂ ಎ ಇ ಇ ಅನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಸಿ.ಟಿ.ಕುಮಾರ್ ಗುರುಚನ್ನಬಸಪ್ಪ, ಶಿವಕುಮಾರ್, ನಟರಾಜ್, ಜಗದೀಶ್, ಮಂಜುನಾಥ್, ಯತೀಶ್, ಸತ್ತಿಗಪ್ಪ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!